

ಮಂಜುನಾಥ ಆಯ್ಕಸ್ವಾಮಿ ಹೊಸಪೇಟೆ
ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳು ಕಳೆದ ಡಿಸೆಂಬರ್‌ನಿಂದ ಬದಲಾವಣೆ ಆಗಬೇಕಿತ್ತು. ಆದರೆ, ಟೆಂಡರ್ ಕರೆಯುವುದರಲ್ಲೇ ಕಾಲಹರಣವಾಗುತ್ತಿದೆ.
ಜಲಾಶಯದ 32 ಕ್ರಸ್ಟ್ ಗೇಟ್ ಬದಲಾವಣೆಗೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಅರ್ಜಿ ಸಲ್ಲಿಸಿದ್ದ ನಾಲ್ಕು ಗುತ್ತಿಗೆ ಕಂಪನಿಗಳು ಅರ್ಹತೆ ಹೊಂದದ ಕಾರಣ ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದಿದೆ. ಏಳು ದಿನದೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ. ಜಲಾಶಯದ ಗೇಟ್‌ಗಳ ಬದಲಾವಣೆಗೆ ಪರಿಣತ ತಜ್ಞರು ಸಲಹೆ ನೀಡಿದ್ದಾರೆ. ಇನ್ನೂ ಎನ್‌ಡಿಟಿ ಸರ್ವಿಸ್ ಸಂಸ್ಥೆ ಕೂಡ ಅಧ್ಯಯನ ನಡೆಸಿ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ 32 ಗೇಟ್ ಗಳ ಬದಲಾವಣೆಗೆ ಇ-ಟೆಂಡರ್ ಕರೆಯಲಾಗಿತ್ತು, ಗುಜರಾತ್ ಮೂಲದ ಮೂರು ಕಂಪನಿಗಳು ಹಾಗೂ ಅಂಧ್ರದ ಒಂದು ಕಂಪನಿ ಟೆಂಡರ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವು.
ಆದರೆ, ಈ ಕಂಪನಿಗಳು ಅರ್ಹತೆ ಹೊಂದಿಲ್ಲದ ಕಾರಣ ಮರು ಟೆಂಡರ್ ಕರೆಯಲಾಗಿದೆ. ಇನ್ನೊಂದೆಡೆ ಗುಜರಾತ್ ಕಂಪನಿಯೊಂದು ಅರ್ಹತೆ ಹೊಂದಿದ್ದರೂ ವರ್ಕ್ ಡನ್ ಸರ್ಟಿಫಿಕೇಟ್ ಅನ್ನು ಟೆಂಡರ್ ಅರ್ಜಿಯಲ್ಲಿ ನಮೂದು ಮಾಡಿರಲಿಲ್ಲ ಎಂಬ ಮಾಹಿತಿ ವಿಜಯವಾಣಿಗೆ ಲಭಿಸಿದೆ. ಈ ಮಧ್ಯೆ 19ನೇ ಗೇಟ್‌ನ ಸ್ಟಾಪ್‌ಲಾಗ್ ತೆರವು ಮಾಡಿ. ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ಗುಜರಾತ್‌ನ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಕಂಪನಿಗೆ ತುಂಗಭದ್ರಾ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಗೇಟ್‌ನ ಕಾಮಗಾರಿ ವಿನ್ಯಾಸವನ್ನೂ ಕೇಂದ್ರ ಜಲ ಆಯೋಗಕ್ಕೂ ರವಾನೆ ಮಾಡಲಾಗಿದೆ. ಈಗ ಗುಜರಾತ್ ಕಂಪನಿ ಗೇಟ್ ಅಳವಡಿಕೆಗೆ ಪ್ರಾಥಮಿಕ ತಯಾರಿಯೂ ನಡೆಸಿದೆ. ಶೀಘ್ರವೇ 19ನೇ ಗೇಟ್ ಅಳವಡಿಕೆ ಕಾಮಗಾರಿ ಜಲಾಶಯದಲ್ಲಿ ನಡೆಯಲಿದೆ.
ಇನ್ನೊಂದೆಡೆ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಬದಲಾವಣೆ ಕಾಮಗಾರಿಯಲ್ಲಿ ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಈಗಾಗಲೇ 19ನೇ ಗೇಟ್‌ಗೆ ಆಳವಡಿಸಿರುವ ಸ್ಟಾಪ್‌ಲಾಗ್ ತೆರವು ಮಾಡಿ, ಗೇಟ್ ಅಳವಡಿಕೆಗೆ ಗುಜರಾತ್‌ನ ಹಾರ್ಡ್ ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಕಂಪನಿಗೆ ಅವಕಾಶ ನೀಡಲಾಗಿದೆ. ಈಗ ಮತ್ತೆ ಹೊರ ರಾಜ್ಯದ ಕಂಪನಿಗಳೇ ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯಬೇಕಿದೆ. ತುಂಗಭದ್ರಾ ಜಲಾಶಯಕ್ಕೆ ಧಕ್ಕೆಯುಂಟಾದಾಗ ಸ್ಥಳೀಯ ಕಂಪನಿಗಳು ನೆರವಿಗೆ ಧಾವಿಸಿವೆ. ಹಾಗಾಗಿ ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರಗೆ ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರಿನ ಶಾಸಕರು ಗಮನ ಸೆಳೆದಿದ್ದಾರೆ. ಈಗ ಕಾಕತಾಳೀಯ ಎಂಬಂತೆ ಮರು ಟೆಂಡರ್ ಕೂಡಾ ಕರೆಯಲಾಗಿದ್ದು, ಸ್ಥಳೀಯ ಕಂಪನಿಗಳು ಅರ್ಜಿ ಸಲ್ಲಿಸಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಐದು ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. ಗುರುವಾರ ಸಂಜೆ ವೇಳೆಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಒಟ್ಟಾರೆ 2100 ಕ್ಯೂಸೆಕ್ ಹೊರಹರಿವಿದೆ. ಸದ್ಯ ಜಲಾಶಯದಲ್ಲಿ 10.058 ಟಿಎಂಸಿ ನೀರಿದೆ. ಕಳೆದ ಬಾರಿ 3.380 ಟಿಎಂಸಿ ನೀರಿತ್ತು.
ಟಿಬಿಡ್ಯಾಂ ಗೇಟ್ ಬದಲಾವಣೆ ಪ್ರಕ್ರಿಯೆಯಲ್ಲಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದ್ದ ನಾಲ್ಕು ಕಂಪನಿಗಳು ಅರ್ಹತೆ ಹೊಂದಿರದ ಕಾರಣ ಮರು ಟೆಂಡರ್ ಕರೆಯಲಾಗಿದೆ. ಐದು ದಿನಗಳ ಕಾಲ ಅವಕಾಶ ಇದ್ದು, ಅರ್ಹ ಕಂಪನಿಗೆ ಟೆಂಡರ್ ನೀಡಲಾಗುತ್ತದೆ. | ಒ.ಆರ್.ಕೆ.ರೆಡ್ಡಿ ಕಾರ್ಯದರ್ಶಿ, ಟಿಬಿಡ್ಯಾಂ