

ಹೊಸಪೇಟೆ: ಸಕ್ಕರೆ ಕಾರ್ಖಾನೆ ಪ್ರಾರಂಭ ಹಾಗೂ ಸುಸ್ತಿ ಸಾಲ ಬಡ್ಡಿ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಬಿಡಿಸಿಸಿ ಬ್ಯಾಂಕ್‌ನಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಸಕ್ಕರೆ ಕಾರ್ಖಾನೆ ನಿಂತುಹೋಗಿದ್ದು, ಬೇರೆಡೆ ಕಬ್ಬು ಸಾಗಿಸುವಂತಾಗಿದೆ. ಇದರಿಮದ ರೈತರಿಗೆ ಟನ್ ಕಬ್ಬಿಗೆ ಅಂದಾಜು ಒಂದು ಸಾವಿರ ರೂಪಾಯಿಗೂ ಅಧಿಕ ವರೆಗೆ ನಷ್ಟ ಅನುಭವಿಸುವಂತಾಗಿದೆ. ಚುನಾವಣೆ ಮುಂಚೆ ಸಿಎಂ ಸಿದ್ದರಾಮಯ್ಯ ಸ್ಥಳೀಯ ಸಕ್ಕರೆ ಕಾರ್ಖಾನೆ ನಮ್ಮ ಸರ್ಕಾರ ಬಂದ ನಂತರ ಪ್ರಾರಂಭ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಆದಕಾರಣ ಕಾಂಗ್ರೆಸ್ ಸರ್ಕಾರ ಬಂದು 18 ತಿಂಗಳಾದರೂ ಇದುವರೆಗೂ ಯಾವುದೇ ಶಾಸಕರಾಗಲಿ, ಸಚಿವರಾಗಲಿ, ಸ್ಥಳೀಯ ಸಕ್ಕರೆ ಕಾರ್ಖಾನೆಯ ಬಗ್ಗೆ ಮಾತನಾಡುತ್ತಿಲ್ಲ. ಮೂಕವೇದನೆಯನ್ನು ಮಾಡುತ್ತಿದ್ದು, ಈ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಸುಸ್ತಿ ಸಾಲ ಬಡ್ಡಿ ಮನ್ನಾ ಮಾಡಬೇಕು. ಅಕಾಲಿಕ ಮಳೆಗಾಳಿಯಿಂದಾಗಿ ತುಂಬಲಾರದಷ್ಟು ನಷ್ಟವಾಗಿದೆ. ಕೂಡಲೇ ಬೆಳೆ ಪರಿಹಾರವನ್ನು ಈ ಕೂಡಲೇ ನೀಡಬೇಕು. ಬಿ.ಡಿ.ಸಿ.ಸಿ. ಬ್ಯಾಂಕಿನ ಶತಮಾನೋತ್ಸವಕ್ಕಾಗಿ ಅಂದಾಜು 4 ರಿಂದ 5 ಕೋಟಿ ರೂ.ನಷ್ಟು ಖರ್ಚು ವೆಚ್ಚವಾಗಿದೆ. ಇದರ ಬಗ್ಗೆ ಸೂಕ್ತ ಸಮಗ್ರ ತನಿಖೆಯಾಗಬೇಕು. ಬ್ಯಾಂಕ್‌ನ ನೇಮಕಾತಿಯಲ್ಲಿ ಭ್ರಷ್ಟಾಚಾರ ಆಗಿದ್ದು, ನ್ಯಾಯಯುತವಾಗಿ ನೇಮಕಾತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಟಿ.ನಾಗರಾಜ್, ತಾಲೂಕು ಅಧ್ಯಕ್ಷರು ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ಎಂ.ಜಡೆಪ್ಪ, ಕೆ.ರಾಮಾಂಜಿನಿ, ಗಾಳೆಪ್ಪ, ರೇವಣ ಸಿದ್ದಪ್ಪ, ಎಚ್.ಹನುಮಂತರೆಡ್ಡಿ ಇತರರಿದ್ದರು.