

ಹೊಸಪೇಟೆ: ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡುವುದು ನೋಡಿದ್ದೇವೆ. ತಾಲೂಕಿನ ಹೊಸೂರು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಶಿಕ್ಚಕರು ವಿನೂತನವಾಗಿ ವಿದ್ಯಾರ್ಥಿಗಳಿಗೆ ಪ್ರಾಯೋಕ ಪಾಠಕ್ಕೆ ಮುಂದಾಗಿದ್ದಾರೆ.
ಶಾಲೆ ಎಂದರೆ ಆಟ-ಪಾಠಕ್ಕೆ ಸೀಮಿತವಾಗದೆ ಜೀವನದ ಅಸಲಿ ಪಾಠವನ್ನು ಕಲಿಯಲು, ಏಳನೇ ತರಗತಿಯ ಸೀನ ಸೆಟ್ಟರು ನಮ್ಮ ಟೀಚರು ಎಂಬ ಪಾಠವನ್ನು ಆಧರಿಸಿ ಪ್ರಾಯೋಗಿಕವಾಗಿ ಕಲಿಸಬೇಕೆಂಬ ಶಿಕ್ಷಕರ ಆಶಯದಂತೆ 40 ಮಕ್ಕಳು ರೈತ ಸುದರ್ಶನ್ ಅವರ ಗದ್ದೆಗೆ ತೆರಳಿ ಭತ್ತ ನಾಟಿ ಮಾಡುವ ಮೂಲಕ ಗಮನ ಸೆಳೆದರು.
ಲೇಖಕಿ ವಿ.ಗಾಯತ್ರಿ ಬರೆದ ತುಂಗಾ ಕಾದಂಬರಿಯಿAದ ಸೀನ ಸೆಟ್ಟರು ನಮ್ಮ ಟೀಚರು ಎಂಬ ಪಾಠವನ್ನು ಏಳನೇ ತರಗತಿಗೆ ಅಳವಡಿಕೆ ಮಾಡಲಾಗಿದೆ. ಇದು ಜಪಾನನ ಹಳ್ಳಿಯೊಂದರ ಕಥೆಯಾಗಿದ್ದು, ಈ ಪಾಠದಂತೇ ಹುಸೂರು ಶಾಲೆಯ ಶಿಕ್ಷಕರು ಮಕ್ಕಳಿಗೆ ಬರೀ ಪಠ್ಯದಲ್ಲೇ ಉಳಿಸದೇ ಅವರಲ್ಲೂ ಕೌಶಲ್ಯ ಮೈಗೂಡಿಸಲು ರೈತರು ಹೇಗೆ ಭತ್ತ ನಾಟಿ ಮಾಡುತ್ತಾರೆ? ಭತ್ತವನ್ನು ಯಾವ ರೀತಿ ಬೆಳೆಸುತ್ತಾರೆ ಎಂಬುದನ್ನು ತೋರಿಸಲು ಮಕ್ಕಳಿಗೆ ಗದ್ದೆಗೆ ಕರೆದುಕೊಂಡು ಹೋಗಿ, ಮಕ್ಕಳಿಂದಲೇ ಭತ್ತದ ಸಸಿ ನಾಡಿ ಹಾಗೂ ಇತರೆ ಕಾರ್ಯಗಳ ಪ್ರಾಯೋಗಿಕ ನಡೆಯಿತು.
ಶಾಲೆಯಲ್ಲಿ ಪ್ರಾರ್ಥನೆ ಮುಗಿದೊಡನೆ, ತರಗತಿಯಲ್ಲಿ ಬ್ಯಾಗ್ ಇಟ್ಟು ಊರಿನ ಬಳಿ ಭತ್ತದ ನಾಟಿ ಮಾಡುವ ಪ್ರದೇಶಕ್ಕೆ ತೆರಳಿದರು. ರೈತರಾದ ಸುದರ್ಶನ್ ಅವರನ್ನು ಭೇಟಿ ಮಾಡಿ ಭತ್ತದ ನಾಟಿ ಮಾಡಲು ಅನುಮತಿ ಪಡೆದ ಬಳಿಕ ಗದ್ದೆಯಲ್ಲಿ ಸಸಿ ಕಿತ್ತು, ಸಿವುಡು ಕಟ್ಟಿದರು. ಬಳಿಕ ನಾಟಿ ಮಾಡಿದರು. ಗದ್ದೆಯಲ್ಲಿ ನೀರು ಇದ್ದರೂ ಅಂಜದೇ ಮಕ್ಕಳು, ಥೇಟ್ ಕೃಷಿರಂತೇ ಭತ್ತ ನಾಟಿ ಮಾಡಿದರು. ಶಾಲಾ ಮಕ್ಕಳಂತೂ ಉತ್ಸಾಹದಿಂದ ಭತ್ತ ನಾಟಿ ಮಾಡಿದರು. ಗದ್ದೆಯಲ್ಲಿ ಓಡಾಡಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ತಾ.ಪಂ. ಸಿಇಒ ಹರೀಶ್ ಅವರು ಸಹಾ ಭಾಗಿಯಾದರು. ಹೊಸೂರು ಗ್ರಾ.ಪಂ. ಅಧ್ಯಕ್ಷೆ ಜೆ.ಪದ್ಮ, ಮುಖ್ಯಶಿಕ್ಷಕ ಆರ್.ಮಂಜಪ್ಪ, ಶಿಕ್ಷಕರಾದ ಗುರುರಾಜ್, ಪ್ರವೀಣ್, ಸ್ವೇತಾ, ಸೌಜನ್ಯ ಇತರರಿದ್ದರು.
ಕ್ಷೇತ್ರ ಪರಿಶೀಲನೆ ವೇಳೆ ಹೊಸೂರು ಕಡೆ ಹೋಗಿದ್ದೆ. ಶಾಲಾ ಮಕ್ಕಳು ಗದ್ದೆಯಲ್ಲಿ ಇರುವುದನ್ನು ನೋಡಿ ಗಾಡಿ ನಿಲ್ಲಿಸಿದೆ. ತರಗತಿ ಪಾಠಕ್ಕೆ ಆಧರಿಸಿ ಪ್ರಾಯೋಗಿಕವಾಗಿ ಶಿಕ್ಷಕರು ಪಾಠ ಮಾಡಿಸಿದರು. ಇದು ಹೊಸತನ ಎನಿಸಿತು. ಮಕ್ಕಳಿಗೆ ಯಾವುದೇ ಪಾಠಗಳು ಪ್ರಾಯೋಗಿಕವಾಗಿ ನಡೆದಾಗ ಮಕ್ಕಳಿಗೆ ಹೆಚ್ಚು ಅರ್ಥ ಆಗಲಿದೆ.- ಹರೀಶ್, ಇಒ, ತಾ.ಪಂ, ಹೊಸಪೇಟೆ