

ಹೊಸಪೇಟೆ: ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದ್ದಾರೆ.
ನಗರದ ಶ್ರೀಶಂಕರ ಆನಂದ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಗಳು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ. ಮದ್ಯ, ತಂಬಾಕು, ಡ್ರಗ್ಸ್, ಗಾಂಜ, ಅಫೀಮು ಮತ್ತಿತರವು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. 17ರಿಂದ18 ವರ್ಷ ವಯೋಮಾನದವರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇವರು ಸಾಮಾನ್ಯ ವ್ಯಕ್ತಿಗಿಂತ 3 ಪಟ್ಟು ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಾರೆ. ಸಾವು ಬೇಗ ಸಂಭವಿಸುತ್ತದೆ. ಹಲವರಿಗೆ ವ್ಯಸನದಿಂದ ಹೊರ ಬರಲು ಚಿಕಿತ್ಸೆ ಪಡೆಯಬೇಕು ಎಂಬ ಅರಿವು ಇಲ್ಲ. ಈ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಿದೆ. ಮನಸ್ಸು ನಿಯಂತ್ರಣದಲ್ಲಿ ಇದ್ದರೆ, ವ್ಯಸನಗಳಿಂದ ದೂರ ಇರುತ್ತಿರಿ. ಮೊಬೈಲ್ ಬದಲಿಗೆ ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ. ಪುಸ್ತಕ ನಿಮ್ಮ ಸ್ನೇಹಿತವಾಗಲಿ ಎಂದು ಹೇಳಿದರು.
ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಮಾದಕವಸ್ತು ಸೇವನೆ ಸಾಂಕ್ರಾಮಿಕ ರೋಗವಿದ್ದ ಹಾಗೇ. ಒಬ್ಬರು ಅದನ್ನು ಕಲಿತರೆ ಅದನ್ನು ನೋಡಿ ಮತ್ತೊಬ್ಬರು ಕಲಿಯುತ್ತಾರೆ. ಇದು ಕ್ರಿಮಿನಲ್ ಪ್ರಕರಣಕ್ಕೆ ದಾರಿ ಮಾಡಿಕೊಡುತ್ತಿದೆ. ಇದರಿಂದ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ. ಮಾದಕವಸ್ತು ಸೇವಿಸುವವರಿಗೆ ಯಾವುದೇ ಪಾಪಪ್ರಜ್ಞೆ ಇರುವುದಿಲ್ಲ. ಹಣಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಿರುತ್ತಾರೆ. ಇಂತಹ ವ್ಯಕ್ತಿಗಳ ಬಗ್ಗೆ ಜಾಗೃತರಾಗಿರಬೇಕು. ಮಾದಕವಸ್ತು ಸೇವಿಸುವವರನ್ನು ಸಮಾಜ ತಿರಸ್ಕರಿಸುವ ಮೂಲಕ ಸುಧಾರಣೆ ತರುವ ಕಾರ್ಯವಾಗಬೇಕಿದೆ ಎಂದು ಪ್ರತಿಪಾದಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಹೆಬಸೂರು, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಷಣ್ಮುಖ ನಾಯ್ಕ, ಪ್ರಾಧ್ಯಾಪಕ ಸಿ.ದೇವಣ್ಣ, ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ.ಸಿ.ವೀರೇಂದ್ರ ಪಾಟೀಲ್, ಐಕ್ಯೂಎಸಿ ಸಂಚಾಲಕ ಡಾ.ಗುರುರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ ಇತರರಿದ್ದರು.