

ಹೊಸಪೇಟೆ: ಇಲ್ಲಿನ ಪಾರ್ವತಿನಗರದ ನಿವಾಸಿ ಆಟೋ ಚಾಲಕ ಎಸ್.ಕುಮಾರಸ್ವಾಮಿ ಹಾಗೂ ಎಸ್. ವೀಣಾ ದಂಪತಿ ಪುತ್ರಿ ಎಸ್.ವಿಶಾಲಾಕ್ಷಿ ಎಸ್ಸೆಸ್ಸೆಲ್ಸಿಯಲ್ಲಿ 611 ಅಂಕಗಳನ್ನು ಗಳಿಸಿದ್ದಾರೆ.
ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ಶಾಲೆಯ ವಿದ್ಯಾರ್ಥಿನಿ ಎಸ್. ವಿಶಾಲಾಕ್ಷಿ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾಳೆ. ಈ ಶಾಲೆ ಆರಂಭನಿAದಲೂ ಇಷ್ಟೊಂದು ಅಂಕಗಳನ್ನು ಇದುವರೆಗೆ ಯಾರೂ ಗಳಿಸಿಲ್ಲ. ಇವರ ಅಕ್ಕ ಎಸ್.ಕಾಮಾಕ್ಷಿ ಕಳೆದ ವರ್ಷ ಶೇ.92ರಷ್ಟು ಫಲಿತಾಂಶ ಗಳಿಸಿದ್ದರು. ಆದರೆ. ವಿಶಾಲಾಕ್ಷಿ ಶೇ.97.76ರಷ್ಟು ಫಲಿತಾಂಶ ಪಡೆದು ಶಾಲೆ ಕೀರ್ತಿ ಹೆಚ್ಚಿಸಿದ್ದಾರೆ.
ಕುಮಾರಸ್ವಾಮಿ ಹಾಗೂ ವೀಣಾ ದಂಪತಿಗೆ ಆರು ಜನ ಹೆಣ್ಣು ಮಕ್ಕಳಿದ್ದಾರೆ. ಕಿತ್ತು ತಿನ್ನುವ ಬಡತನ ಇದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಶಪಥ ತೊಟ್ಟಿರುವ ಕುಮಾರಸ್ವಾಮಿಯರು ಹಗಲು-ರಾತ್ರಿ ಎನ್ನದೇ ಆಟೋ ಓಡಿಸುತ್ತಾರೆ. ಅಪ್ಪನ ಕಷ್ಟಕ್ಕೆ ಮುಂದೆ ಆಸರೆಯಾಗಬೇಕು, ಜತೆಗೆ ತಂದೆ ಕನಸು ಈಡೇರಿಸಬೇಕೆಂಬ ಛಲದೊಂದಿಗೆ ಮಕ್ಕಳು ಕೂಡ ಉತ್ತಮ ಅಂಕಗಳನ್ನು ಗಳಿಸಿದ್ದು, ಈಗಾಗಲೇ ಎಸ್. ವಿಶಾಲಾಕ್ಷಿ ಹಾಗೂ ಎಸ್. ಕಾಮಾಕ್ಷಿ ಸಾಬೀತು ಮಾಡಿ ತೋರಿಸಿದ್ದಾರೆ.