ಬೆನ್ನುಹುರಿ ಅಪಘಾತ ನಿರ್ವಹಣೆ ಅರಿವು ಅಗತ್ಯ

06 MANJU 02
Published on

ಹೊಸಪೇಟೆ: ಬೆನ್ನುಹುರಿ ಅಪಘಾತದಿಂದ ನರಗಳಿಗೆ ಆಕಸ್ಮಿಕವಾಗಿ ಆಗುವ ಘಟನೆಗಳ ಮತ್ತು ಬೆನ್ನು ಮೂಳೆ ಕ್ಷಯ ಲಕ್ಷಣಗಳು ಪತ್ತೆಯಾದರೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ಡಿಎಚ್‌ಒ ಡಾ.ಶಂಕರ್‌ನಾಯ್ಕ ಹೇಳಿದರು.

ನಗರದ ತಾಲೂಕು ಆರೋಗ್ಯಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬೆನ್ನುಹುರಿ ಅಪಘಾತ ಮತ್ತು ನಿರ್ವಹಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಬೆನ್ನಿನ ಭಾಗದಲ್ಲಿ ಮೆದುಳಿನಿಂದ ಗುದದ್ವಾರರವರೆಗೂ ಒಟ್ಟು 33 ಗಂಟುಗಳನ್ನು ಒಳಗೊಂಡಿರುತ್ತದೆ. ಮಧ್ಯಭಾಗದಲ್ಲಿ ಹಗ್ಗದ ರೀತಿಯಲ್ಲಿ ಹಾದು ಹೋಗುವ ನೋವನ್ನು ಬೆನ್ನುಹುರಿ ಎನ್ನುತ್ತೇವೆ. ಈ ಮೂಳೆಗಳ ಮಧ್ಯಭಾಗದಲ್ಲಿ ಎರಡು ಮುಖ್ಯವಾದ ಜ್ಞಾನವಾಹಿ ಮತ್ತು ಕ್ರಿಯಾವಾಯಿ ನರಗಳಿದ್ದು ಇವು ಮೆದುಳಿನಿಂದ ದೇಹದ ಎಲ್ಲಾ ಭಾಗಗಳಿಗೂ ಸಂದೇಶ ರವಾನಿಸುವ ಮತ್ತು ಸ್ವೀಕರಿಸುವ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ನರಗಳಿಗೆ ಆಕಸ್ಮಿಕವಾಗಿ ಆಗುವ ಘಟನೆಗಳಿಂದ ಮತ್ತು ಬೆನ್ನು ಮೂಳೆ ಕ್ಷಯ ಕಾಯಿಲೆಯಿಂದ ಬೆನ್ನುಹುರಿಗೆ ಆಘಾತವಾದಾಗ ಅಲ್ಲಿನ ಕೆಳಭಾಗದ ಮನುಷ್ಯನ ದೇಹದ ಎಲ್ಲಾ ಕಾರ್ಯಗಳು ಸ್ಥಗಿತವಾಗುತ್ತವೆ. ಇದರಿಂದ ಬಳಲುವವರು ಮಾನಸಿಕ ಒತ್ತಡ ಅಥವಾ ಹಾಸಿಗೆ ಗಾಯ ಮೂತ್ರನಾಳದ ಸೋಂಕು ಕಾಯಿಲೆ ಜಿಗಿತನ ಊತ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಾರೆ. ಬೆನ್ನುಹುರಿ ಅಪಘಾತ ವ್ಯಕ್ತಿಗೆ ಕಾಯಿಲೆಯ ಲಕ್ಷಣಗಳು ಮತ್ತು ಅವರಿಗೆ ಅವಶ್ಯವಿರುವ ಆರೈಕೆ ಮತ್ತು ವೈದ್ಯಕೀಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಈ ಶಿಬಿರದಿಂದ ಆಗಲಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net