ಸಮಾಜದಲ್ಲಿ ಪೊಲೀಸರ ಪಾತ್ರ ಮಹತ್ವದ್ದು

020922 Bhumi Puja for the new building work of Vijayanagar District Superintendent of Police office
ಹೊಸಪೇಟೆ ನಗರದ ಟಿಎಸ್‌ಪಿಎಲ್ ಆವರಣದಲ್ಲಿ ನೂತನ ಎಸ್ಪಿ ಕಚೇರಿ ನಿರ್ಮಾಣಕ್ಕೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Published on

ಹೊಸಪೇಟೆ: ಸಮಾಜದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಟಿಎಸ್‌ಪಿಎಲ್ ಆವರಣದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ನೂತನ ಕಟ್ಟಡ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು. ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಕರ್ತವ್ಯನಿರ್ವಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡ ಅವಶ್ಯವಿದೆ. ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಎಸ್‌ಪಿ ಕಚೇರಿ ನಿರ್ಮಿಸಲಾಗುತ್ತಿದೆ. ಇಲ್ಲಿ ಆಡಳಿತ ವಿಭಾಗ, ವೈರ್‌ಲೆಸ್ ವಿಭಾಗ, ಅಪರಾಧ ವಿಭಾಗ ಮತ್ತು ರಿಕಾರ್ಡ್ ರೂಂ, ಕಾನೂನು ವಿಭಾಗ, ಮಹಿಳಾ ಮತ್ತು ಮಕ್ಕಳ ವಿಭಾಗಗಳು ಇರಲಿವೆ. ಸಿಬ್ಬಂದಿ ವಸತಿ ಗೃಹವನ್ನೂ ನಂತರ ಒದಗಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಆನಂದ ಸಿಂಗ್ ಮಾತನಾಡಿ, ಹೊಸ ಜಿಲ್ಲೆಯಲ್ಲಿ ಸಕಲ ಸೌಕರ್ಯಗಳನ್ನು ಹೊಂದಲು 10- 15 ವರ್ಷ ಬೇಕಾಗುತ್ತದೆ. ಆದರೆ, ವಿಜಯನಗರ ಜಿಲ್ಲೆಯಾಗಿ ವರ್ಷ ಕಳೆಯುವುದರೊಳಗೆ ಎಸ್ಪಿ ಕಚೇರಿ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಟೀಂ ವರ್ಕ್, ನೆಟ್‌ವರ್ಕ್, ಹಾರ್ಡ್‌ವರ್ಕ್‌ನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಕಾಣಬಹುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ, ಡಿಎಂಎಫ್ ಮತ್ತಿತರ ಅನುದಾನಗಳೂ ನಮಗೆ ಅನುಕೂಲಕರವಾಗಿವೆ ಎಂದರು.

ಶಾಸಕ ಪಿ.ಟಿ.ಪರಮೇಶ್ವರ ನಾಯಕ ಮಾತನಾಡಿ, ಇಷ್ಟು ಅಲ್ಪ ಅವಧಿಯಲ್ಲಿ ಹೊಸ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಗರಿಗೆದಿರಿ ಹೊಸ ಭರವಸೆ ಮೂಡಿಸಿದೆ. ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣ ಅಗತ್ಯವಾಗಿದ್ದು, ಇದಕ್ಕಾಗಿ ಶಾಸಕರ ಡಿಎಂಎಫ್ ನಿಧಿಯನ್ನು ಕಡಿತಗೊಳಿಸಲು ನಮ್ಮ ಸಮ್ಮತಿ ಇದೆ ಎಂದರು.

ಡಿಸಿ ಅನಿರುದ್ಧ ಶ್ರವಣ್ ಮಾತನಾಡಿ, ಮುಂಬರುವ 2023ರ ಗಾಂಧಿ ಜಯಂತಿ ವೇಳೆಗೆ ನೂತನ ಎಸ್ಪಿ ಕಚೇರಿ ನಿರ್ಮಾಣ ಪೂರ್ಣಗೊಂಡರೆ, ನೂತನ ಜಿಲ್ಲೆಗೊಂದು ಕೊಡುಗೆ ನೀಡಿದಂತಾಗುತ್ತದೆ ಎಂದರು. ಸಂಸದ ವೈ.ದೇವೇಂದ್ರಪ್ಪ ಸಾಂದರ್ಭಿಕವಾಗಿ ಮಾತನಾಡಿದರು. ಎಸ್ಪಿ ಡಾ.ಅರುಣ್ ಕೆ., ನಗರಸಭೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಜಿಪಂ ಸಿಇಒ ಹರ್ಷಲ್ ಭೋಯರ್ ಹಾಗೂ ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net