ಸ್ಮಂಗಳ ಬೇಡಿಕೆಗೆ ಬೆಳಗಾವಿ ಚಲೋ

09 MANJU 02
Published on

ಹೊಸಪೇಟೆ: ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಡಿ.13ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವೇಳೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಇಮ್ತಿಯಾಜ್ ಆರ್.ಮಾನ್ವಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ 1.80 ಲಕ್ಷ ಮನೆಗಳನ್ನು ವಿವಿಧ ನಗರ ಪಟ್ಟಣಗಳಲ್ಲಿ ನಿರ್ಮಿಸಲಾಗುತ್ತಿದ್ದು, ಇದು ವರೆಗೆ ಅಂದಾಜು 60 ಸಾವಿರ ಮನೆಗಳನ್ನು ಪೂರ್ಣಗೊಳಿಸಿವೆ. ಹಸ್ತಾಂತರ ಮಾಡಿರುವುದು ಬಿಟ್ಟರೆ ಉಳಿದ 1.20 ಲಕ್ಷ ಕುಟುಂಬಗಳು ಆತಂತ್ರವಾಗಿ ಬೀದಿಗಳಲ್ಲಿ ಬದುಕುತ್ತಿದ್ದಾರೆ. 2020ರಲ್ಲಿ ಜಾರಿಗೆ ತಂದ ಕೊಳಗೇರಿ ನಿವಾಸಿಗಳಿಗೆ ಭೂ ಒಡೆತನ ನೀಡುವ ಹಕ್ಕುಪತ್ರ 3.36 ಲಕ್ಷ ಕುಟುಂಬಗಳ ಪೈಕಿ ಈ ವರೆಗೂ 1.14 ಲಕ್ಷ ಕುಟುಂಬಗಳಿಗೆ ಮಾತ್ರ ನೀಡಲಾಗಿದೆ. ಸ್ಲಂ ನಿವಾಸಿಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆ ಧೋರಣೆ ಎಂದು ಆಗ್ರಹಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಸಾಲಿನ ಬಜೆಟ್‌ನಲ್ಲಿ ಬರಿ 30 ಕೋಟಿಗಳನ್ನು ಸ್ಲಂಗಳ ಅಭಿವೃದ್ಧಿಗೆ ನೀಡಿದ್ದಾರೆ. ಸಾಮಾಜಿಕ ನ್ಯಾಯದಲ್ಲಿ ಸ್ಲಂ ಜನರನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ. ಖಾಸಗಿ ಮಾಲೀಕತ್ವದ 710ಕ್ಕೂ ಹೆಚ್ಚು ಸ್ಲಂಗಳು ಘೋಷಣೆಯಾಗಿ 1.50 ಲಕ್ಷ ಕುಟುಂಬಗಳು ಜೀವನ ಸಾಗಿಸುತ್ತಿವೆ. ಸ್ಲಂ ಜನರಿಗೆ ಹಕ್ಕುಪತ್ರ, ನೋಂದಣಿ, ಇ.ಖಾತಾ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು. ಮುಂದಿನ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು. ಸ್ಲಂ ಅನುಭವವಿಲ್ಲದ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ವೆಂಕಮ್ಮ, ರಾಜಾಮಾಬಿ, ಶಿವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net