

ಹೊಸಪೇಟೆ: ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದ ಬಳಿ ಗಣಿಗಾರಿಕೆಗೆ ಪರವಾನಗಿ ನೀಡಬಾರದು ಎನ್ನುವ ವಿಚಾರವಾಗಿ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಬಳಿ ಮಾತನಾಡಿರುವೆ. ಈ ಬಗ್ಗೆ ಬಳ್ಳಾರಿ ಡಿಸಿಗೆ ವರದಿ ಕೊಡಲು ಹೇಳಿದ್ದು, ನಂತರ ಪ್ರತಿಕ್ರಿಯಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣದಲ್ಲಿ ಆಂಧ್ರ-ತೆಲಂಗಾಣದ ಭಾಗವಿದೆ. ಶೇ.65 ರಾಜ್ಯ ಮತ್ತು ಶೇ.35 ನೆರೆ ರಾಜ್ಯಗಳು ಇದರ ಪಾಲುದಾರರು. ಆಯಾ ಸಿಎಂ ಜತೆ ಮಾತನಾಡುವೆ ಎಂದರು.
ವಿಜಯನಗರಕ್ಕೆ ಡಿಎಂಎಫ್ ಅನುದಾನದಲ್ಲಿ ಗೊಂದಲವಿಲ್ಲ. ಈ ಬಗ್ಗೆ ಕಾರ್ಯದರ್ಶಿಗೆ ಮಾತನಾಡಿರುವೆ. ವಿಜಯನಗರಕ್ಕೆ 218 ಕೋಟಿ ರೂ. ಬರಬೇಕೆಂದು ಹೇಳುತ್ತಿದ್ದಾರೆ. ಶೇ.28 ವಿಜಯನಗರಕ್ಕೆ ಮತ್ತು ಶೇ.72 ಬಳ್ಳಾರಿಗೆ ಕೊಡಬೇಕೆದು ನಿರ್ಧಾರ ಆಗಿದೆ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸಿಕೊಳ್ಳುವಂತೆ ಜಮೀರ್ ಅಹಮದ್ ಖಾನ್‌ಗೆ ಸೂಚನೆ ನೀಡಲಾಗಿದೆ. ವಿಜಯನಗರದ ಜತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನೂ ನೀಡಲಾಗುವುದು ಎಂದು ಸಿಎಂ ಹೇಳಿದರು. ಬಿ.ನಾಗೇಂದ್ರ ರಾಜೀನಾಮೆಯಿಂದ ಬಳ್ಳಾರಿ ಜಿಲ್ಲಾ ಉಸ್ತುವಾರಿ ತೆರವಾಗಿತ್ತು.