ಶಿವರಾತ್ರಿ ಹಂಪಿಗೆ ಭಕ್ತ ಸಾಗರ

IMG-20250226-WA0044
Published on

ಹೊಸಪೇಟೆ: ಮಹಾಶಿವರಾತ್ರಿ ನಿಮಿತ್ತ ರಾಜ್ಯ ಸೇರಿ ನೆರೆಹೊರೆಯ ರಾಜ್ಯಗಳ ಸಾವಿರಾರು ಭಕ್ತರು, ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.

ಶಿವರಾತ್ರಿ ನಿಮಿತ್ತ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯನಗರ ಅರಸರ ಕಾಲದಲ್ಲಿ ನೀಡಲಾಗಿರುವ ಸ್ವರ್ಣ ಮುಖ ಕಮಲವನ್ನು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಧರಿಸಲಾಯಿತು. ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಾಗರಣೆ ನಿಮಿತ್ತ ದೇಗುಲ ಆವರಣದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ನೆರವೇರಿಸಿದ ಭಕ್ತರು, ಶ್ರೀವಿರೂಪಾಕ್ಷೇಶ್ವರ ದೇವರಿಗೆ ಹೂ, ಹಣ್ಣು, ಕಾಯಿ ಸಮರ್ಪಿಸಿದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದಲೂ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಶಿವರಾತ್ರಿ ನಿಮಿತ್ತ ದೇಗುಲ ಆವರಣದಲ್ಲಿ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ದೇಗುಲದ ಆನೆ ಲಕ್ಷ್ಮೀ ಭಕ್ತರ ಗಮನ ಸೆಳೆಯಿತು.

ಎಲ್ಲೇಡೆ ಸಂಭ್ರಮ

ನಗರ ಸೇರಿ ಜಿಲ್ಲಾಧ್ಯಾಮತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತು. ನಗರದ ಶಿವಾಲಯಗಳು ಭಕ್ತಸಾಗರದಿಂದ ತುಂಬಿತುಳಕಿತು. ಜಂಬೂನಾಥೇಶ್ವರ, ನಗರೇಶ್ವರ, ಮಾರ್ಕಂಡೇಶ್ವರ, ನೀಲಕಂಠೇಶ್ವರ, ಓಂಕಾರೇಶ್ವರ, ಕಲ್ಮಟೇಶ್ವರಪೇಟೆ ಬಸವೇಶ್ವರ, ಮೇನ್ ಬಜಾರದಲ್ಲಿರುವ ಈಶ್ವರ ದೇವಸ್ಥಾನಗಳು ಸೇರಿದಂತೆ ಶಿವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ಪೂಜೆಸಲ್ಲಿಸುವ ಮೂಲಕ ಮಹಾಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net