ಮಕ್ಕಳ ಪ್ರತಿ ಹೆಜ್ಜೆಗೆ ದಾರಿ ದೀಪವಾಗಿ

IMG-20240909-WA0024
Published on

ಹೊಸಪೇಟೆ: ಹಿರಿಯ ನಾಗರಿಕರು ಮಕ್ಕಳು ಮತ್ತು ಕುಟುಂಬದ ಜತೆಗೆಯೇ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳೊಂದಿಗೆ ಮಾತನಾಡವೇಕು. ಮಕ್ಕಳಿಗೆ ಹಿರಿಯರೇ ಅತ್ಯುತ್ತಮ ಮಾರ್ಗದರ್ಶಕರು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ‌ ಹಾಗೂ ವಿಶೇಷ ಚೇತನರು ಹಾಗೂ‌‌ ಹಿರಿಯ ನಾಗರಿಕರ ಸಬಲೀಕರಣ‌ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕ್ರೀಡಾಕೂಟ ಮತ್ತು‌ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯರಾದವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಜತೆಗಿದ್ದಾಗ ಮಕ್ಕಳಂತಿರುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿರಲಿ, ಮೊಮ್ಮಕ್ಕಳಿರಲಿ ಯಾರಾದರು ಸಿಡಿಮಿಡಿಗೊಂಡಾಗ ಆ ವೇಳೆ ಹಿರಿಯರು ಮೌನ ವಹಿಸಬೇಕು. ಮಾತಿಗೆ ಮಾತು ಬೆಳೆಸಬಾರದು. ಶಾಂತರಾಗಿದ್ದು, ವಾತಾವರಣ ತಿಳಿಯಾದಾಗ ಕಿರಿಯರಿಗೆ ತಿಳಿ ಹೇಳಬೇಕು. ಕುಟುಂಬ ನಡೆಸುವ ಮಹತ್ವದ ಜವಾಬ್ದಾರಿಯ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಜೀವನದ ಪ್ರತಿ ಹೆಜ್ಜೆಗಳಿಗೆ ದಾರಿ ದೀಪ ಆಗಬೇಕಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ,
ಈ ಹಿಂದೆ ಹಿರಿಯ ನಾಗರಿಕರು ಬಹುತೇಕ ತಮ್ಮ ಸಮಯವನ್ನು ಮನೆಯಲ್ಲಿ ಮಕ್ಕಳ ಜತೆಗೆ ಕಳೆಯುತ್ತಿದ್ದರು. ಈಗ ಈ ವಾತಾವರಣ ಕಾಣುತ್ತಿಲ್ಲ.‌ ಹಿರಿಯರಾದವರು ಆಸ್ತಿ ಹಣದ ಬೆನ್ನು ಹತ್ತಿ ಹೋಗಬಾರದು. ಭ್ರಮೆಗಳಿಂದ ಹೊರಬರಬೇಕು. ಚಿಂತೆಗಳನ್ನು ಕೈಬಿಡಬೇಕು. ಹಿರಿಯರೇ ಕುಟುಂಬದ ಗುರು ಮತ್ತು ನಾಯಕ ಇದ್ದಂತೆ. ಹಿರಿಯರು ನಿತ್ಯ ವಾಯುವಿಹಾರದಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸಲು ಮತ್ತು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಸರ್ಕಾರದಿಂದಲೇ ಈ ದಿನ ಆಚರಿಸಲಾಗುತ್ತಿದೆ ಎಂದರು.

ಹಿರಿಯ ನಾಗರಿಕರಿಗೆ ಪುರುಷರ ವಿಭಾಗದಲ್ಲಿ ನಡಿಗೆ ಸ್ಪರ್ಧೆ, ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ಗಾಯನ ಸ್ಪರ್ಧೆ ಮತ್ತು ಏಕಪಾತ್ರ ಅಭಿನಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವಿನಾಶ ಎಸ್ ಗೋಟಖಿಂಡಿ, ಹರಪನಹಳ್ಳಿಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ಹೊಸಪೇಟೆ ನಿವೃತ್ತ ನೌಕರ ಸಂಘದ ಅಧ್ಯಕ್ಷ ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net