

ಹೊಸಪೇಟೆ: ನಗರದ ಮಾರ್ಗವಾಗಿ ಸಿಕಂದರಾಬಾದ್-ವಾಸ್ಕೋ-ಡ-ಗಾಮಾ (ಗೋವಾ)ನಡುವೆ ನೂತನ ರೈಲು ಸಂಚಾರ ಆರಂಭವಾಗಲಿದೆ.
ಅ.09 ರಿಂದ ಈ ರೈಲು ಬುಧವಾದ ಮತ್ತು ಶುಕ್ರವಾರ ವಾರಕ್ಕೆ ಎರಡು ಬಾರಿ ಸಂಚರಿಸಲಿದೆ. ಗಾಡಿ ಸಂಖ್ಯೆ 17039, ಸಿಕಂದರಾಬಾದ್ ನಿಲ್ದಾಣದಿಂದ ಬೆ.10ಕ್ಕೆ ನಿರ್ಗಮಿಸಿ ಕಾಚಿಗೂಡ, ಜೆಡ್ರ‍್ಲ, ಗದ್ವಾಲ್, ಕರ್ನೂಲ್ ಸಿಟಿ, ಧೋನ್, ಗುಂತಕಲ್, ಬಳ್ಳಾರಿ ಮಾರ್ಗವಾಗಿ ಹೊಸಪೇಟೆಗೆ ರಾತ್ರಿ 7.50ಕ್ಕೆ ಆಗಮಿಸಲಿದೆ. ಇಲ್ಲಿಂದ ಕೊಪ್ಪಳ, ಗದಗ, ಹುಬ್ಬಳ್ಳಿಯನ್ನು ರಾತ್ರಿ 10.50ಕ್ಕೆ ತಲುಪಿ ಧಾರವಾಡ, ಲೋಂಡಾ, ಮಡ್‌ಗಾವ್ ಮಾರ್ಗವಾಗಿ ವಾಸ್ಕೋ-ಡ-ಗಾಮಾವನ್ನು ಮರುದಿನ ಮುಂಜಾನೆ 5.45ಕ್ಕೆ ತಲುಪುತ್ತದೆ.
ಹಾಗೂ ಅದೇ ರೀತಿ ವಾಸ್ಕೋ-ಡ-ಗಾಮಾ ಗಾಡಿ ಸಂಖ್ಯೆ 17040ದಿಂದ ಗುರುವಾರ ಮತ್ತು ಶನಿವಾರ ಬೆಳಿಗ್ಗೆ 9 ಗಂಟೆಗೆ ನಿರ್ಗಮಿಸಿ ಅದೇ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5 ಗಂಟೆಗೆ ಆಗಮಿಸಲಿದೆ. ಮರುದಿನ ಮುಂಜಾನೆ 6.20ಕ್ಕೆ ಸಿಕಂದರಾಬಾದ್ ನಿಲ್ದಾಣ ತಲುಪುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೇಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರೆಗೂ ಸಿಕಂರಾಬಾದ್ ಮತ್ತು ಗೋವಾ ನಡುವೆ ನೇರ ಹಾಗೂ ಪ್ರತ್ಯೇಕ ಪ್ರಯಾಣಿಕರ ರೈಲಿನ ವ್ಯವಸ್ಥೆ ಇರಲಿಲ್ಲ. ಈ ನಗರಗಳು ನಡುವೆ ಸಂಚರಿಸುವ ಪ್ರಯಾಣಿಕರು ಗುಂತಕಲ್ ನಿಲ್ದಾಣದಲ್ಲಿ ರೈಲು ಬದಲಿಸಬೇಕಿತ್ತು, ಈಗ ನೇರ ಸಂಪರ್ಕ ಕಲ್ಪಿಸಿರುವುದರಿಂದ ತೆಲಂಗಾಣ, ಆಂದ್ರ ಪ್ರದೇಶ, ಕರ್ನಾಟಕ, ಹಾಗೂ ಗೋವಾ ರಾಜ್ಯಗಳ ಐತಿಹಾಸಿಕ ನಗರಗಳ ನಡುವೆ ಸಂಪರ್ಕ ಕಲ್ಪಿಸಿರುವುದರಿಂದ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗುತ್ತವೆ. ಜತೆಗೆ ಪ್ರಯಾಣಿಕರ ಸಂಚಾರ ಅವಧಿ ಕಡಿಮೆಯಾಗುತ್ತದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.