

ಹೊಸಪೇಟೆ: ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿಯ ಸಭೆಗೆ ಜಿಲ್ಲೆಯ ಅನುಷ್ಠಾನ ಇಲಾಖೆಗಳು ಯೋಜನೆಗಳ ಪ್ರಗತಿ ವರದಿಯೊಂದಿಗೆ ಸ್ಪಷ್ಟವಾಗಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ವಿಧಾನಮಂಡಲದ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಮಿತಿಯು ಸೆ.19 ರಿಂದ 21ರ ವರೆಗೆ ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಸಮುದಾಯಗಳ ಅಭಿವೃದ್ಧಿ, ಕಲ್ಯಾಣ, ಏಳಿಗೆಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯು ಸೆ.21ರಂದು ನಡೆಯಲಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳವಾರು ಪ್ರಗತಿ ವರದಿಯನ್ನು ಸಂಬAಧಪಟ್ಟ ಎಲ್ಲ ಇಲಾಖೆಗಳು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಇಲಾಖೆಗಳು ಸಲ್ಲಿಸಿದ ಮಾಹಿತಿಯುಳ್ಳ ಬುಕ್ ಲೆಟ್ ಸಿದ್ದಪಡಿಸಿ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಪ್ರಗತಿ ಪರಿಶೀಲನಾ ಸಭೆಗೆ ಕಳುಹಿಸಿಕೊಡಲು ಮತ್ತು ಮಾಹಿತಿ ನೀಡದ ಇಲಾಖೆಗಳಿಗೆ ನೋಟೀಸ್ ಜಾರಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಸ್ಪಷ್ಟ ಮಾಹಿತಿ ನೀಡುವಲ್ಲಿ ನಿಮಗೆ ಸಮಸ್ಯೆಯಿದ್ದಲ್ಲಿ ಮೇಲಾಧಿಕಾರಿಗಳಿಂದ ಕೇಳಿ, ಸರಿಯಾದ ಮಾಹಿತಿಯನ್ನು ಕೂಡಲೇ ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿ ಬಾಬು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಸ್.ಮಂಜುನಾಥ ಇತರರಿದ್ದರು.