

ಹೊಸಪೇಟೆ: ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ತೆಗೆದು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಬರುವ ಬುಡ್ಗ ಜಂಗಮ ಸಮಾಜದವರು ಮಾಂಸಹಾರಿಗಳು, ವೀರಶೈವರು ಸಸ್ಯಾಹಾರಿಗಳು ಅದು ಹೇಗೆ ಪರಿಶಿಷ್ಟ ಜಾತಿಯಲ್ಲಿ ಬರುತ್ತಾರೆ. ಬೇಡ ಜಂಗಮರು ಪುರೋಹಿತರು, ಗುರು ಸ್ಥಾನದಲ್ಲಿದ್ದಾರೆ. ಅವರು ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಈಗ ಅದ್ಹೇಗೆ ಮೀಸಲಾತಿ ಸೌಲಭ್ಯ ಪಡೆಯುತ್ತಾರೆ. ಈಗಾಗಲೇ ಬೇಡ ಜಂಗಮ ಪ್ರಮಾಣಪತ್ರ ಪಡೆದವರ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಅಲ್ಲದೇ ಪರಿಶಿಷ್ಟ ಜಾತಿಯಲ್ಲಿ ಬೇಡ ಜಂಗಮ ಪ್ರಮಾಣಪತ್ರದ ಅಡಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉದ್ಯೋಗ ಪಡೆದವರ ಮಾಹಿತಿಯೂ ಪಡೆಯುತ್ತೇವೆ. ಈ ನಕಲಿ ಪ್ರಮಾಣಪತ್ರ ನೀಡಿದ ತಹಸೀಲ್ದಾರ್‌ಗಳು ಜೈಲಿಗೆ ಹೋಗಬೇಕು. ಈ ರೀತಿ ಹೋರಾಟ ರೂಪಿಸುತ್ತೇವೆ. ಅರ್ಹರ ಸೌಲಭ್ಯ ಇನ್ನೊಬ್ಬರಿಗೆ ಹೋಗಬಾರದು. ಈ ಕುರಿತು ಪರಿಶಿಷ್ಟ ಜಾತಿಯ ಎಲ್ಲಾ ಸಮಾಜದ ಮುಖಂಡರು ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇವೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ತೆಗೆಸಲಾಗುವುದು ಎಂದರು.
ಮಾದಿಗ ಸಮಾಜ ಒಳ ಮೀಸಲಾತಿ ಹೋರಾಟವನ್ನು ದಶಕಗಳಿಂದ ನಡೆಸುತ್ತಾ ಬಂದಿದೆ. ಆಂಧ್ರಪ್ರದೇಶದ ಮಂದಕೃಷ್ಣ ಅವರ ಹೋರಾಟವನ್ನು ನಾವು ಮರೆಯುವಂತಿಲ್ಲ. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸಲು ಆದೇಶ ನೀಡಿದ ಬಳಿಕ ರಾಜ್ಯದಲ್ಲಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಒಂದು ಕೋಟಿ ಐದು ಲಕ್ಷ ಜನರನ್ನು ಗುರುತಿಸಲಾಗಿದೆ. ಬೆಂಗಳೂರು ಭಾಗದಲ್ಲಿ ಸರ್ಕಾರಿ ಶಾಲೆಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಹಿನ್ನಡೆ ಆಗಿದೆ. ಅಲ್ಲೂ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರ ಕ್ರಮ ವಹಿಸಿದೆ ಎಂದರು.
ಮುಖAಡರಾದ ವೀರಸ್ವಾಮಿ, ಕೊಗಿನಹಾಳು ಮಲ್ಲಿಕಾರ್ಜುನ, ಲಕ್ಷ್ಮಣ, ನಿಂಬಗಲ್ ರಾಮಕೃಷ್ಣ, ಮಾರೆಣ್ಣ, ಸಣ್ಣಮಾರೆಪ್ಪ, ಸೋಮಶೇಖರ, ಎಚ್. ಶೇಷು, ಎ. ಬಸವರಾಜ ಮತ್ತಿತರರಿದ್ದರು.
ಭಾರತ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಬರೆದು ಕೊಟ್ಟಿದ್ದಾರೆ. ಅಲ್ಲದೇ, ಮೀಸಲಾತಿ ಸೌಲಭ್ಯ ಒದಗಿಸಿದ್ದಾರೆ. ಅಂಬೇಡ್ಕರ್ ಅವರು ನಮಗೆ ಮೀಸಲಾತಿ ನೀಡಿದರೆ, ಈಗ ಸಿದ್ದರಾಮಯ್ಯನವರು ಒಳ ಮೀಸಲಾತಿ ನೀಡುವ ಮೂಲಕ ನಮ್ಮ ಪಾಲಿನ ಅಂಬೇಡ್ಕರ್ ಆಗಿದ್ದಾರೆ. ಹಾಗಾಗಿ ಒಳ ಮೀಸಲಾತಿ ಜಾರಿ ಆದ ಬಳಿಕ ರಾಯಚೂರಿನಲ್ಲಿ ವಿಜಯೋತ್ಸವ ಸಮಾರಂಭ ಆಯೋಜನೆ ಮಾಡಲಾಗುವುದು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಸಮರ್ಪಣೆ ನೆರವೇರಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.