

ಮರಿಯಮ್ಮನಹಳ್ಳಿ: ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿAದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಪ.ಪಂ. ಅಧ್ಯಕ್ಷ ಆದಿಮನಿ ಹುಸೇನ್ ಭಾಷ ಹೇಳಿದರು.
ಇಲ್ಲಿನ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಿಯಮ್ಮನಹಳ್ಳಿಯ ಸವಿತಾ ಸಮಾಜಕ್ಕೆ 5 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಸವಿತಾ ಸಮಾಜಕ್ಕೆ ನಿವೇಶ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸವಿತಾ ಸಮಾಜದ ಗೌರವಾಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಸವಿತಾ ಮಹರ್ಷಿಯು ರಥಸಪ್ತಮಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತಿತಿಯಿದೆ. ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿ ದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.
ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಅತ್ಯಂತ ಶ್ರೀಮಂತ ಪರಂಪರೆ ಇರುವ ಸವಿತಾ ಸಮಾಜ ಒಗ್ಗಟ್ಟಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಇತರರಿಗೆ ಆದರ್ಶ ಪ್ರಾಯರಾಗಿ ಬೆಳೆಯಬೇಕು ಎಂದು ಅವರು ಹೇಳಿದರು.
ಸವಿತಾ ಸಮಾಜದ ಅಧ್ಯಕ್ಷ ಸಿ.ಕೆ.ರಾಮುಡು ಅಧ್ಯಕ್ಷತೆ ವಹಿಸಿದರು. ಪ.ಪಂ. ಸದಸ್ಯರಾದ ಅಶ್ವಿನಿ ನಾಗರಾಜ, ಎಲ್.ವಸಂತ, ಪ್ರಮುಖರಾದ ರೋಗಾಣಿ ಮಂಜುನಾಥ, ಕೆ.ತಮ್ಮಣ್ಣ, ಶಿವಮ್ಮ, ಕೃಷ್ಣಮ್ಮ ಇತರರಿದ್ದರು.