

ಹೊಸಪೇಟೆ: ಹಂಪಿ ಪರಿಸರದಲ್ಲಿ ನಡೆದ ಲೈಂಗಿಕ ಹಾಗೂ ದೈಹಿಕ ಹಲ್ಲೆ, ಹತ್ಯೆ ಮಾಡಿದಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯಿಂದ ಎಸ್ಪಿ ಬಿ.ಎಲ್.ಶ್ರೀಹರಿಬಾಬುಗೆ ಮನವಿ ಸಲ್ಲಿಸಲಾಯಿತು.
ಹಂಪಿ ಪರಿಸರದ ಸಣಾಪುರ ಲೇಕ್ ಬಳಿ ಇತ್ತೀಚಿಗೆ ನಡೆಯಬಾರದಾದ ಆಘಾತಕಾರಿ ದುರ್ಘಟನೆಯೊಂದು ನಡೆದಿದೆ. ಇದು ಹಂಪಿಗೆ ಬರುವ ಪ್ರವಾಸಿಗರಲ್ಲಿ ಭೀತಿಯನ್ನು ಉಂಟುಮಾಡಿದೆ. ಆದ್ದರಿಂದ ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸಲಾಗುತ್ತಿದೆ. ಹೋಂಸ್ಟೇ ಮಾಲೀಕರು, ಪ್ರವಾಸಿ ಮಾರ್ಗದರ್ಶಿಗಳು, ಆಟೋ ರಿಕ್ಷಾ ಚಾಲಕರು ಈ ದುರ್ಘಟನೆಯನ್ನು ಖಂಡಿಸಿ, ಪ್ರವಾಸಿಗರ ದುಃಖದಲ್ಲಿ ನಾವೂ ಭಾಗಿಯಾಗಿ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸುರಕ್ಷತೆಯ ಭಾವನೆಯನ್ನು ಪ್ರವಾಸಿಗರಿಗೆ ಕಲ್ಪಿಸಿ, ಪ್ರವಾಸಿಗರೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಗಂಗಾವತಿ ಗ್ರಾಮಾಂತರ ಠಾಣೆಯನ್ನು ಸಣಾಪುರ ಲೇಕ್ ಬಳಿ ಸ್ಥಳಾಂತರಿಸಬೇಕೆಂದು ಒತ್ತಾಯಿಸುತ್ತೇವೆ. ಹಾಗೂ ಹಂಪಿ ಪರಿಸರವು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಸೂಕ್ತ ಸಿ ಸಿ ಕ್ಯಾಮರಾ ವ್ಯವಸ್ಥೆ, ಪೊಲೀಸ ಬೀಟ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ವಿಜಯನಗರ ಜಿಲ್ಲೆಯ ಹಂಪಿಯ ಸಂರಕ್ಷಣೆಗೋಸ್ಕರ ಪೊಲೀಸ್ ಉಪಾಧೀಕ್ಷಕರ ಕಚೇರಿಯನ್ನು ಪುನರ್ ಸ್ಥಾಪನೆ ಮಾಡಬೇಕು. ತುಂಗಭದ್ರಾ ನದಿಯ ವಾಟರ್ ಫಾಲ್ಸ್ನಲ್ಲಿ ಬಹಳಷ್ಟು ಪ್ರವಾಸಿಗರು ಸೇರುತ್ತಿದ್ದು, ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಅನಧಿಕೃತ ಮಾರ್ಗದರ್ಶಿಗಳು ಈ ಹಿಂದೆ ಬಹಳಷ್ಟು ಮಹಿಳಾ ಪ್ರವಾಸಗರೊಂದಿಗೆ ಅನುಚಿತ ವರ್ತನೆಯನ್ನು ತೋರಿದ್ದು, ಅವರನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಪ್ರವಾಸಿಗರಿಗೆ ಭದ್ರತೆ ಇಲ್ಲದಂತಾಗಿದೆ. ಹಂಪಿಯ ಸ್ಮಾರಕಗಳ ಬಳಿ ರಾತ್ರಿಯ ಸಮಯದಲ್ಲಿ ಬೆಳಕಿನ ವ್ಯವಸ್ಥೆಯ ಅಭಾವವಿದ್ದು, ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.