

ಹೊಸಪೇಟೆ: ಅಮೂಲ್ಯ ಜೀವಗಳನ್ನು ಉಳಿಸಲು ಪ್ರತಿಯೊಬ್ಬರು ರಸ್ತೆ ಸಂಚಾರಿ ನಿಯಮಗಳನ್ನು ಕರ್ತವ್ಯವೆಂದು ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆಯಿಂದ ನಗರದ ಗಾಂಧಿಚೌಕ್‌ನಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಸಡಕ್ ಸುರಕ್ಷಾ-ಜೀವನ ರಕ್ಷಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶುಕ್ರವಾರ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದಿರುವುದೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ರಸ್ತೆ ಸಂಚರಿಸುವಾಗ ಅತಿ ವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲನೆ ಮಾಡಬಾರದು. ಮೋಬೈಲ್ ಪೋನ್ ಬಳಕೆ ಮಾಡುತ್ತಾ ವಾಹನ ಚಲಾಯಿಸ ಕೂಡದು. ಹೆಲ್ಮಟ್ ಧರಿಸದೇ, ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸುವುದು ನಿಯಮ ಮಾಹಿರ. ಸಂಚಾರಿ ನಿಯಮಗಳ ನಿರ್ಲಕ್ಷö್ಯದಿಂದಾಗಿ ಅನೇಕ ಅಪಘಾತಗಳು ಸಂಭವಿಸಿ ಜೀವನಗಳು ಹಾನಿಯಾಗಿರುವ ಪ್ರಕರಣಗಳು ಹೆಚ್ಚಾಗಿವೆ. ಸಾಮಾನ್ಯ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಹಿತದೃಷ್ಟಿಯಿಂದ ಜಾಗೃತಿ ಜಾಥಾದ ಮೂಲಕ ಅರಿವು ಮೂಡಿಸಬೇಕಿದೆ ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಜಿಲ್ಲೆಯಲ್ಲಿ ೨೭೫ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಒಂದು ನಿಮಿಷದ ನಿರ್ಲಕ್ಷö್ಯತನ ಒಂದು ಅಮೂಲ್ಯ ಜೀವವನ್ನು ಬಲಿ ತೆಗೆದುಕೊಳ್ಳಲಿದೆ. ಪ್ರತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವ ವೇಳೆ ಯಾವುದೇ ಅಪಘಾತಗಳು ಕಂಡು ಬಂದರೇ ಶೀಘ್ರ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವುದು ಮುಖ್ಯವಾಗಿದೆ. ಅಪಘಾತ ವೇಳೆಯಲ್ಲಿ ಆಸ್ಪತ್ರೆಗೆ ದಾಖಲಿಸಿದವರ ಹೆಸರು, ವಿಳಾಸದ ಅಗತ್ಯವಿಲ್ಲ. ಮಾನವೀಯತೆಯನ್ನು ಮರೆಯದೆ ಅಪಘಾತದಲ್ಲಿರುವರನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದರು.