

ಹೊಸಪೇಟೆ: ಒಳ ಮೀಸಲಾತಿಯಲ್ಲಿ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದು ಮಾದಿಗ ಸಮಾಜದ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ಕಾಲ ಹರಣ ಮಾಡಲು ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದೆ. ಈ ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ನೀಡಲಾಗಿಲ್ಲ. ಸರ್ಕಾರದ ಬಳಿ ನ್ಯಾ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಸಮಿತಿ ವರದಿ ಇದ್ದರೂ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ಸುಖಾಸುಮ್ಮನೆ ಈಗ ಆಯೋಗ ರಚನೆ ಮಾಡಿದೆ ಎಂದು ದೂರಿದರು.
ಬೆಳಗಾವಿ ಸಮಾವೇಶದ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಸೇರಿದಂತೆ ರಾಜ್ಯದ ಎಲ್ಲಾ ಶಾಸಕರ ಮನೆ ಎದುರು ಡಿ.14ರಂದು ತಮಟೆ ಚಳವಳಿ ನಡೆಸಲಾಗುವುದು. ಈ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಒಳ ಮೀಸಲಾತಿ ಪರ ಧ್ವನಿ ಎತ್ತಲು ಒತ್ತಾಯಿಸಲಾಗುವುದು ಎಂದರು.
ಸುಪ್ರೀA ಕೋರ್ಟ್ ತೀರ್ಪು ಬಂದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಬದ್ಧತೆ ತೋರಿಲ್ಲ. ಸಾಮಾಜಿಕ ನ್ಯಾಯ ಎಂದು ಹೇಳುವ ಪಕ್ಷವೇ ಈಗ ಸಾಮಾಜಿಕ ನ್ಯಾಯ ಒದಗಿಸುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳ ಮೀಸಲಾತಿ ಜಾರಿಗೊಳಿಸಲು ಸೂಚಿಸಬೇಕು. ಎಂತಹ ಪ್ರಭಾವಿಗಳು ಪ್ರಭಾವ ಬೀರಿದರೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಪೂಜಪ್ಪ, ಎಂ.ಸಿ. ವೀರಸ್ವಾಮಿ, ಎಚ್.ಶೇಷ, ನಿಂಗಪ್ಪ, ಶೇಕ್ಷಾವಲಿ, ಜಗನ್, ರಾಘವೇಂದ್ರ ಮತ್ತಿತರರಿದ್ದರು.