

ಹೊಸಪೇಟೆ: ಒಳಮೀಸಲಾತಿ ಜಾರಿ ಸಂಬAದ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆ.1ಕ್ಕೆ ವರ್ಷವಾಗಿದ್ದು ರಾಜ್ಯ ಸರ್ಕಾರ ಜಾರಿಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಮಾದಿಗ ಸಂಘಟನೆಗಳ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಅರೆಬೆತ್ತಲೆ ಹಾಗೂ ಸೇವಿಂಗ್ ಪ್ಲೇಡ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನಗರದ ಸಾಯಿಬಾಬಾ ವೃತ್ತದಿಂದ ಪ್ರತಿಭಟನಾ ರ‍್ಯಾಲಿ ನಡೆಸಿದರು. ಕೆಲವರು ಅರೆಬೆತ್ತಲೆಯಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ರ‍್ಯಾಲಿ ನಡೆಸಿ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸುತ್ತಿದ್ದಂತೆ ತೀವ್ರತೆಪಡೆದ ಪ್ರತಿಭಟನೆಯಲ್ಲಿ ಕೆಲವರು ಶೇವಿಂಗ್ ಬ್ಲೇಡ್ ಹಿಡಿದು ಪ್ರದರ್ಶಸಿಸಿದರು. ಇದಕ್ಕೆ ಪೊಲೀಸರು ತಡೆಯುತ್ತಿದ್ದಂತೆ ರವಿಕಿರಣ್ ಎಂಬ ಪ್ರತಿಭಟನಕಾರ ನಮ್ಮನ್ನು ತಡೆದರೆ ಕುತ್ತಿಗೆಗೆ ಬ್ಲೇಡ್ ಹಾಕಿಕೊಳ್ಳುವೆ ಎಂದು ಪೊಲೀಸರಿಗೆ ಬೆದರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆಯಿತು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.
ಪ್ರಮುಖರಾದ ಬಲ್ಲಾಹುಣ್ಸಿ ರಾಮಣ್ಣ, ಎಂ.ಸಿ.ವೀರಸ್ವಾಮಿ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ವರ್ಷದಿಂದಲೂ ಮೀನ- ಮೇಷ ಎಣಿಸುತ್ತಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಂದ ಇಂದಿಗೂ ವರದಿ ಪಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿಗಳಿಗಾಗಿ ನಡೆಸಿದ ಜನಗಣತಿಗೊಂದಲದ ಗೂಡಾಗಿದ್ದು, ಅದೂ ಸಮರ್ಪಕವಾಗಿ ನಡೆದಿಲ್ಲ. ಒಳಮೀಸಲಾತಿ ಜಾರಿಗೊಳಿಸುವ ಬದ್ಧತೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರದರ್ಶನ ಮಾಡುತ್ತಿಲ್ಲ. ಹೀಗಾಗಿ ನಾವು ಬೀದಿಗಿಳಿಯುವುದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಯಿತು. ದತ್ತಾಂಶ ಸಂಗ್ರಹ ನೆಪದಲ್ಲಿ ಆಯೋಗ ರಚಿಸಿದ ರಾಜ್ಯ ಸರ್ಕಾರ ದಿನ ದೂಡುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಒಳಮೀಸಲಾತಿ ಜಾರಿಗೊಳಿಸುವ ಪರವಾಗಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡರಿಗೆ ಬದ್ಧತೆ ಇಲ್ಲ ಎಂದು ದೂರಿದರು.
ಪ್ರಮುಖರಾದ ಕೆ.ಪಿ.ಉಮಾಪತಿ, ತಗ್ಗಿನಕೇರಿ ಕೊಟ್ರೇಶ್, ಮಲ್ಲಿಕಾರ್ಜುನ ಕೊಟಗಿನಾಳ, ಪೂಜಪ್ಪ, ಕೊಟ್ಟೂರು ಮರಿಸ್ವಾಮಿ, ಕಣಿವೆಹಳ್ಳಿ ಮಂಜುನಾಥ, ಎಸ್.ದುರ್ಗೇಶ್, ವಿಶಾಲಾಕ್ಷಿ, ಸಿ.ಆರ್.ಭರತ್‌ಕುಮಾರ್, ಶೇಷು, ಸಣ್ಣ ಮಾರೆಪ್ಪ, ಬಸವರಾಜ್, ಲಕ್ಷ್ಮಣ ಕಾರಿಗನೂರು ಇತರರಿದ್ದರು.