

ಹೊಸಪೇಟೆ: ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿ, ಬಲಗೈ ಸಮುದಾಯದ ಜನಸಂಖ್ಯೆ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಣ್ಣದಮನೆ ಸೋಮಶೇಖರ್ ದೂರಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ನಿಗದಿಪಡಿಸಿರುವ ಶೇ.1ರಷ್ಟು ಮೀಸಲಾತಿ ರದ್ದುಪಡಿಸಬೇಕು. ಈ ಮೀಸಲಾತಿಯನ್ನು ಸಂಬAಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾ. ನಾಗ ಮೋಹನ್ ದಾಸ್ ಏಕ ಸದಸ್ಯ ಆಯೋಗ 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು, ಪ್ರಸಕ್ತ ಐದು ಗುಂಪುಗಳಾಗಿ ವಿಂಗಡಿಸಿದೆ. ಹಿಂದುಳಿದ ಗುಂಪಿಗೆ ಶೇ.1ರಷ್ಟು ಎಡಗೈ, ಶೇ.6ರಷ್ಟು ಬಲಗೈ, ಗುಂಪಿಗೆ ಶೇ.5ರಷ್ಟು, ಬಂಜಾರ, ಬೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇ.4ರಷ್ಟು ಮತ್ತು ಜಾತಿಯೇ ಅಲ್ಲದ ಜಾತಿಗಳಿಗೆ ಮೀಸಲಾತಿ ನಿಗದಿ ಮಾಡಲಾಗಿದೆ. ಈ ಆಯೋಗದ ವರದಿ ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿದ್ದು, ವರದಿಯಲ್ಲಿನ ನೂನ್ಯತೆ ಸರಿಪಡಿಸಿಯೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾ. ನಾಗ ಮೋಹನ್ ದಾಸ್ ಏಕ ಸದಸ್ಯ ಆಯೋಗ ಜನಸಂಖ್ಯೆ ಬೆಳವಣಿಗೆ ದರವನ್ನು 1.47 ಕೋಟಿ ಇರುವುದನ್ನು 1.16 ಕೋಟಿ ಎಂದು ತಪ್ಪಾಗಿ ಲೆಕ್ಕ ಹಾಕಿ ನಮೂದಿಸಿಕೊಂಡಿದೆ. ಸ್ವಯಂ ದೃಢೀಕರಣ ಸಲ್ಲಿಸುವವರಿಗೆ ಭಾರೀ ತೊಂದರೆ ಎದುರಾಗಿದೆ. ಬೇಡ ಜಂಗಮ ಎಂದು ನಮೂದಿಸಲು ಅವಕಾಶ ಮಾಡಿಕೊಟ್ಟು ನಿಜವಾದ ಬೇಡ ಜಂಗಮರಿಗೆ ಅನ್ಯಾಯವಾಗಿದೆ. ಅವೈಜ್ಞಾನಿಕವಾಗಿ ಕೂಡಿರುವ ಈ ವರದಿಯನ್ನು ಸರ್ಕಾರ ಪರಿಶೀಲಿಸಿ ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಿ, ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಈರಣ್ಣ, ಮರಿಸ್ವಾಮಿ, ರಾಮಚಂದ್ರಬಾಬು, ಶಿವಮೂರ್ತಿ ಇದ್ದರು.