ಹೊಸಪೇಟೆ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿನ ಗೊಂದಲಗಳನ್ನು ಪರಿಹರಿಸುವ ಜತೆಗೆ ಅನ್ಯಾಯಕ್ಕೊಳಗಾಗಿರುವ ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಅಂಬೇಡ್ಕರ್ ಸಂಘದ ಉಪಾಧ್ಯಕ್ಷ ಡಾ.ಎ.ವೆಂಕಟೇಶ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ಗೊಂದಲ ಸೃಷ್ಟಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವೈಜ್ಞಾನಿಕ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದರೆ ನ್ಯಾಯ ಸಿಗುತ್ತಿತ್ತು. ಆದರೆ, ಅದನ್ನು ತಿದ್ದುಪಡಿ ಅನ್ಯಾಯ ಮಾಡಿದೆ. ಎಕೆ, ಎಡಿ, ಎಎ ಗುಂಪುಗಳನ್ನು ಒಂದು ವರ್ಗಕ್ಕೆ ಸೇರಿಸದೆ ಗೊಂದಲ ಮೂಡಿಸಿದೆ. ಇದನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟದಲ್ಲಿ ಎ ಮತ್ತು ಬಿ ಗೆ ತಲಾ 6 ಮತ್ತು ಸಿ ಗೆ ಶೇ.5ರಷ್ಟು ಮೀಸಲಾತಿ ನೀಡಿದ್ದು, ನಿರ್ಲಕ್ಷಿತ ಸಮುದಾಯವನ್ನು ಪ್ರಬಲರ ಜತೆ ಸೇರಿಸಿ ಅಸಮಾನತೆ ಮಾಡಿದ್ದಾರೆ. ರಾಜಕೀಯ ಒತ್ತಾಸೆ, ಬಲವಂತಿಕೆಗೆ ಈ ಸರ್ಕಾರ ಮಣಿದಿದೆ. ಸರಿಯಾದ ನ್ಯಾಯ ಒದಗಿಸಿಲ್ಲ. ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗಲಿದೆ. ಒಳಮೀಸಲಾತಿ ಹಂಚಿಕೆ ಮತ್ತೆ ಮರು ಪರಿಶೀಲಿಸಿ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಎಂ.ಸಿ.ವೀರಾಸ್ವಾಮಿ, ಎಚ್.ಶೇಷು, ಎಚ್.ಎಸ್.ವೆಂಕಪ್ಪ, ಬಸವರಾಜು, ಸೆಲ್ವಂ, ಕೆ.ಲಕ್ಷ್ಮಣ ಇತರರಿದ್ದರು.