

ಹೊಸಪೇಟೆ: ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಕೃಷಿ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ, ಸಿಐಟಿಯು, ಡಿವೈಎಫ್‌ಐ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಶನಿವಾರ ಎಸಿ ಕಚೇರಿಗೆ ಆಗಮಿಸಿದ್ದರು. ಆದರೆ, ಒಂದು ತಾಸು ಕಾದರೂ ಅಧಿಕಾರಿಗಳು ಬಾರದ ಕಾರಣ ಆಕ್ರೋಶಗೊಂಡ ಮುಖಂಡರು, ಕಚೇರಿ ಎದುರಿನ ಸಂಡೂರು ರಸ್ತೆಯಲ್ಲಿ ಧರಣಿ ಕುಳಿತರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಜೆ.ಕಾರ್ತಿಕ್ ಮಾತನಾಡಿ, ದೆಹಲಿಯಲ್ಲಿ ರೈತರು ನೂರಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇಲ್ಲಿ ಮನವಿ ಸ್ವೀಕರಿಸಲೂ ಅಧಿಕಾರಿಗಳು ಬಾರದೆ ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಎಸ್‌ಐ ಜಡಿಯಪ್ಪ, ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಭಟನೆ, ಧರಣಿಗೆ ಅವಕಾಶವಿಲ್ಲ. ಯಾರ ಅನುಮತಿ ಪಡೆದು ಧರಣಿ ನಡೆಸುತ್ತಿದ್ದೀರಿ, ಕೂಡಲೇ ಜಾಗ ಖಾಲಿ ಮಾಡಿ ಎಂದು ತಾಕೀತು ಮಾಡಿದರು. ಈ ವೇಳೆ ಸಂಘಟನೆಗಳ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಎಸಿ ಅಥವಾ ತಹಸೀಲ್ದಾರ್ ಬಂದು ಮನವಿ ಸ್ವೀಕರಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಧರಣಿ ನಿರತರು ಪಟ್ಟು ಹಿಡಿದರು. ಕೆಲ ಗಂಟೆ ಬಳಿಕ ಎಸಿ ಸಿದ್ದರಾಮೇಶ್ವರ ಸೂಚನೆ ಮೇರೆಗೆ ಕಚೇರಿ ಶಿರಸ್ತೇದಾರ್ ಶ್ರೀಧರ ಅಗಮಿಸಿ ಮನವಿ ಸ್ವೀಕರಿಸಿದರು. ಬಳಿಕ ಧರಣಿ ಕೈಬಿಡಲಾಯಿತು.
ಡಿವೈಎಫ್‌ಐ ಪ್ರಧಾನ ಕಾರ್ಯದರ್ಶಿ ಬಿಸಾಟಿ ಮಹೇಶ್, ಸಿಐಟಿಯು ಪದಾಧಿಕಾರಿಗಳಾದ ಭಾಸ್ಕರ್ ರೆಡ್ಡಿ, ಯಲ್ಲಾಲಿಂಗ, ಕೆ.ನಾಗರತ್ನಮ್ಮ, ಮಾನವ ಹಕ್ಕುಗಳ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಇತರರಿದ್ದರು.