ರೆಡ್ಡಿ ವಿರುದ್ಧ ದೂರು ದಾಖಲಿಸಿ

28 MANJU 2
Published on

ಹೊಸಪೇಟೆ: ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ವಾಲ್ಮೀಕಿ ಸಮಾಜದಿಂದ ಪ್ರತಿಭಟನಾ ರ್ಯಾಲಿ ನಡೆಸಿ ಆಗ್ರಹಿಸಿದರು.

ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಸಮಾಜದ ನೂರಾರು ಜನರು, ರೆಡ್ಡಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಟೈರ್‌ಗೆ ನೀರು ಹಾಕಿ ಬೆಂಕಿ ಆರಿಸಲು ಬಂದ ಪೊಲೀಸರನ್ನು ಪ್ರತಿಭಟನಾಕಾರರು ತಡೆದರು. ಈ ವೇಳೆ ವಾಗ್ವಾದ ಕೂಡಾ ನಡೆಯಿತು. ನಂತರ, ಎಸ್ಪಿ ಕಚೇರಿ ವರೆಗೆ ಬೈಕ್ ರ್ಯಾಲಿ ಮೂಲಕ ಎಸ್ಪಿ ಕಚೇರಿಯಲ್ಲಿ ಎಎಸ್ಪಿ ಸಲೀಂ ಪಾಷಾಗೆ ದೂರು ನೀಡಿದರು.

ವಾಲ್ಮೀಕಿ ಪೀಠದ ಧರ್ಮದರ್ಶಿ ಜಂಬಯ್ಯ ನಾಯಕ ಮಾತನಾಡಿ, ಗಾಲಿ ಜನಾರ್ದನ ರೆಡ್ಡಿ ಏನು ಬುದ್ಧಿವಂತನಾ? ಅರವತ್ತು ಎಪ್ಪತ್ತು ವರ್ಷಗಳ ಹಿಂದೆಯೇ ಹುಟ್ಟಿದ್ದರಾ ? ಮಾಜಿ ಸಚಿವ ಶ್ರೀರಾಮಲುಗೆ ಹೇಳೊಕೆ ಇವರ್ಯಾರು? ಬೇಕಾದಾಗ ವಾಲ್ಮೀಕಿ ಸಮಾಜವನ್ನು ಉಪಯೋಗಿಸಿಕೊಂಡು ಬಳಿಕ ಸಮಾಜವನ್ನು ಹಾಗೂ ಸಮಾಜದ ಮುಖಂಡರನ್ನು ನಿಂದಿಸುವ, ಅವಹೇಳನ ಮಾಡುವ, ನಿರಾಧಾರ ಆರೋಪ ಮಾಡುವುದನ್ನು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಕೈಬಿಡಬೇಕು. ಇಲ್ಲದಿದ್ದರೆ ಸಮಾಜದ ತಾಕತ್ತು ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ದೇವರ ಮನೆ, ನಗತಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಬುಜ್ಜಿ, ರಾಘವೇಂದ್ರ, ಸಂತೋಷ್, ಪ್ರಮುಖರಾದ ಗೋಸಲ ಭರಮ್ಮಪ್ಪ, ಚನ್ನಕ್ಕಿ ಚಂದ್ರಪ್ಪ, ಜಗದೀಶ್ ಕಮಟಗಿ, ಶ್ರೀಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net