ನೇಮಕಾತಿ ಹಗರಣ ಸಿಒಡಿ ತನಿಖೆ ಆಗಲಿ

080223 BDCC Bank CITU Protest
ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ ಕುರಿತು ತನಿಖೆಗೆ ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ಬುಧವಾರ ಬಿಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
Published on

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಚಿವ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಬೇಕು. ನೇಮಕಾತಿ ಅಕ್ರಮವನ್ನು ಸಿಒಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ನಗರದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಶ್ರಮಿಕ ಭವನದಿಂದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಧಾನ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು, ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ(ಎಂ) ಕಾರ್ಯದರ್ಶಿ ಭಾಸ್ಕರ ರೆಡ್ಡಿ ಮಾತನಾಡಿ, ವಿಜಯನಗರ ಕ್ಷೇತ್ರದಲ್ಲಿ ಆವರಿಸಿರುವ ಭ್ರಷ್ಟಾಚಾರ ಇದೀಗ ಬಿಡಿಸಿಸಿ ಬ್ಯಾಂಕ್‌ಗೂ ವ್ಯಾಪಿಸಿದೆ. ಶತಮಾನದ ಇತಿಹಾಸವಿರುವ ಬಿಡಿಸಿಸಿ ಬ್ಯಾಂಕ್ ವಿರುದ್ಧ ಎಂದೂ ಇಂತಹ ಆರೋಪ ಕೇಳಿಬಂದಿರಲಿಲ್ಲ. ಆದರೆ, ಸ್ಥಳೀಯ ಶಾಸಕ ಹಾಗೂ ಸಚಿವ ಆನಂದ ಸಿಂಗ್ ಅವರೇ ಬ್ಯಾಂಕ್ ಅಧ್ಯಕ್ಷರಾಗಿದ್ದರಿಂದ ಈ ಆರೋಪ ಬಂದಿರುವುದು ಗಮನಾರ್ಹ. ಸಚಿವರ ಅಳಿಯ ಸಂದೀಪ್ ಸಿಂಗ್ ಹಣ ಪಡೆದಿದ್ದಾಗಿ ಮಾತನಾಡಿರುವ ಆಡಿಯೋ ವೈರಲ್ ಹರಿದಾಡುತ್ತಿದೆ. ಸಂದೀಪ್ ಸಿಂಗ್ ಈ ಹಗರಣದ ಸೂತ್ರಧಾರಿ ಎಂದು ಆರೋಪಿಸಿದರು.

ಜತೆಗೆ ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಕೂಡ ಸಾಕ್ಷಾೃಧಾರಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಇಷ್ಟೆಲ್ಲ ಆದರೂ, ಬಿಡಿಸಿಸಿ ಬ್ಯಾಂಕ್ ಮಂಡಳಿ ಮಾತ್ರ ಯಾವುದೇ ತನಿಖೆಯ ಅಗತ್ಯವಿಲ್ಲ ಎನ್ನುವ ಮೂಲಕ ಹಗರಣವನ್ನು ಮುಚ್ಚಿ ಹಾಕುವ ತಂತ್ರ ನಡೆಸಿದೆ ಎಂದು ದೂರಿದರು.

ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಆನಂದ ಸಿಂಗ್ ಸಚಿವರಾಗಿದ್ದರಿಂದ ಬ್ಯಾಂಕ್ ನೇಮಕಾತಿ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುವ ವಿಶ್ವಾಸವಿಲ್ಲ. ಈ ಹಿನ್ನೆಲೆಯಲ್ಲಿ ಆನಂದ ಸಿಂಗ್ ಎರಡೂ ಹುದ್ದೆಗಳನ್ನು ತೊರೆದು, ಸತ್ಯನಿಷ್ಠೆಯ ತನಿಖೆಗೆ ಸಹಕರಿಸಬೇಕು. ಪ್ರಾಮಾಣಿಕ, ಅರ್ಹರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಸಿಪಿಐ(ಎಂ) ಮುಖಂಡ ಎ.ಕರುಣಾನಿಧಿ ಮಾತನಾಡಿ, ರಾಜ್ಯಾದ್ಯಂತ ಶೇ.40 ಕಮಿಷನ್ ಸೋಂಕು ಇದೀಗ ಬಿಡಿಸಿಸಿಗೂ ತಗುಲಿದೆ. 58 ಹುದ್ದೆಗಳಿಗೆ ಸುಮಾರು 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಂದರ್ಶನದ ಹೆಸರಲ್ಲಿ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಂದಲೂ ತಲಾ 20 ರಿಂದ 30 ಲಕ್ಷ ರೂ. ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಬ್ಯಾಂಕ್ ಅಧ್ಯಕ್ಷರೂ ಆದ ಸಚಿವ ಆನಂದ ಸಿಂಗ್ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಒತ್ತಾಯಿಸಿದರು.

ಸಿಪಿಐ(ಎಂ) ಮುಖಂಡ ಜಂಬಯ್ಯ ನಾಯಕ ಮಾತನಾಡಿ, ಅಪೆಕ್ಸ್ ಹಾಗೂ ಆರ್‌ಬಿಐ ನಿಯಮಗಳಿಗೆ ಒಳಪಡುವ ಬಿಡಿಸಿಸಿ ಬ್ಯಾಂಕ್ ಬೇಕಾಬಿಟ್ಟಿಯಾಗಿ ಸಿಬ್ಬಂದಿ ನೇಮಕಾತಿ ನಡೆಸಿರುವುದು ಖಂಡನೀಯ ಎಂದರು. ಸಿಪಿಐ(ಎಂ) ಪ್ರಮುಖರಾದ ಭಾಸ್ಕರರೆಡ್ಡಿ, ಎ.ಕರುಣಾನಿಧಿ, ಜಂಬಯ್ಯ ನಾಯಕ, ಯಲ್ಲಾಲಿಂಗ, ಎಂ.ಗೋಪಾಲ, ಈಡಗರ ಮಂಜುನಾಥ, ಯಲ್ಲಮ್ಮ, ಕೆ.ನಾಗರತ್ನಮ್ಮ, ಸ್ವಪ್ನ, ಶಕುಂತಲಾ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯನಗರ ಜಿಲ್ಲೆಯಲ್ಲಿ ಸಚಿವ ಆನಂದ ಸಿಂಗ್ ಮಾಡಿದ್ದೇ ಕಾನೂನು ಎನ್ನುವಂತಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸಕರು ನಡೆಸುತ್ತಿರುವುದು ಆಡಳಿತವಲ್ಲ. ದರ್ಬಾರ್ ಎನ್ನುವಂತಾಗಿದೆ. ಮೆರಿಟ್ ಇದ್ದರೂ, ಕೆಲಸ ಸಿಕ್ಕಿಲ್ಲ. ಅರ್ಹ ಪ್ರತಿಭಾನ್ವಿತರಿಗೆ ಅನ್ಯಾಯವಾಗಿದೆ.| ಭಾಸ್ಕರ ರೆಡ್ಡಿ, ಸಿಪಿಐ(ಎಂ) ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net