ಅತ್ಯಾಚಾರಯ ಆರೋಪಿಗೆ ತಕ್ಷಣವೇ ಶಿಕ್ಷೆಯಾಗಲಿ

19 MANJU 02
Published on

ಹೊಸಪೇಟೆ: ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಐದು ವರ್ಷದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ವಿರೋಧಿಸಿ ಎಐಡಿವೈಓ, ಎಐಎಮ್‌ಎಸ್‌ಎಸ್, ಹಾಗೂ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ಪುನೀತ್ ರಾಜಕುಮಾರ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ತಹಸೀಲ್ ಕಚೇರಿ ಮುಂದೆ ಸಮಾವೇಶಗೊಂಡು ಆಗ್ರಹಿಸಿದರು.

ಎಐಎಂಎಸ್‌ಎಸ್ ಸಂಚಾಲಕಿ ಕೆ.ಈಶ್ವರಿ ಮಾತನಾಡಿ, ಪ್ರತಿ 11 ನಿಮಿಷಕ್ಕೊಮ್ಮೆ ದೇಶದಲ್ಲಿ ಅತ್ಯಾಚಾರ ಘಟನೆ ನಡೆಯುತ್ತಿದೆ. ಆದರೂ, ಅತ್ಯಾಚಾರ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅತ್ಯಾಚಾರಕ್ಕೆ ಪ್ರೇರೆಪಿಸುತ್ತಿರುವ ಅಶ್ಲೀಲತೆ, ಮದ್ಯ ಮಾದಕ ವಸ್ತುಗಳನ್ನೂ ಸರ್ಕಾರ ತಡೆಗಟ್ಟುವ ಬದಲಾಗಿ ಬಂಡವಾಳವನ್ನಾಗಿಸಿಕೊAಡು ಯುವಜನತೆಯ ನೈತಿಕತೆಯನ್ನು ಮುರಿಯುತ್ತಿದೆ. ಆಟವಾಡುವ ಹಸುಳೆಯ ಮೇಲೆ ಅತ್ಯಾಚಾರ ನಡೆಸುವುದು ಇದ್ಯಾವ ರೀತಿಯಲ್ಲಿ ನಾಗರೀಕ ಸಮಾಜ ಎಂದು ಎನಿಸಿಕೊಳ್ಳುತ್ತದೆ? ಎಂದು ಆಗ್ರಹಿಸಿದರು.

ಅತ್ಯಾಚಾರಕ್ಕೆ ಒಳಗಾದ ಕಂದಮ್ಮಳ ಭವಿಷ್ಯದ ಎಲ್ಲ ರೀತಿಯ ಜವಾಬ್ದಾರಿಗಳನ್ನು ಸರ್ಕಾರವು ವಹಿಸಿಕೊಳ್ಳಬೇಕು. ಅಪರಾಧಿಗೆ ತ್ವರಿತ ನ್ಯಾಯಾಲಯದ ಮೂಲಕ ತಕ್ಷಣವೇ ಶಿಕ್ಷೆ ಜಾರಿಯಾಗಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ವರದಿ ಜಾರಿಗೊಳಿಸಬೇಕು. ಅಶ್ಲೀಲತೆ, ಮದ್ಯ ಮಾದಕ ವಸ್ತುಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಎಐಎಂಎಸ್‌ಎಸ್ ಸಂಚಾಲಕಿ ಕೆ.ಎಂ.ಈಶ್ವರಿ, ಪ್ರಮುಖರಾದ ಪ್ರಕಾಶ್ ನಾಯ್ಕ, ಪಾಲಾಕ್ಷ, ಪಂಪಾಪತಿ, ಸಮೀರ್, ಅಭಿಷೇಕ್ ಕಾಳೆ, ಮಂಜುಳಾ, ಮಹೇಶ್ವರಿ, ಯಶೋಧಮ್ಮ, ಮಾನಸಾ, ಹುಲಿಗೆಮ್ಮ, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net