

ಹೊಸಪೇಟೆ: ನಗರದ ರಾಣಿ ಪೇಟೆಯಲ್ಲಿ ಕಲುಷಿತ ನೀರು ಪೂರೈಕೆಯನ್ನು ತಡೆಯಲು ಪ್ರತೀ ಕ್ರಾಸ್‌ನಲ್ಲಿ ನೀರು ಸಂಗ್ರಹಿಸಿ ಪರೀಕ್ಷಿಸಿದ ಬಳಿಕವೇ ಸಾರ್ವಜನಿಕರಿಗೆ ನೀರು ಪೂರೈಸಬೇಕು. ಅಲ್ಲಿವರೆಗೆ ಟ್ಯಾಂಕರ್ ಮೂಲಕವೇ ಜನರಿಗೆ ಶುದ್ಧ ನೀರು ಒದಗಿಸಬೇಕು ಎಂದು ನಗರಸಭೆ ಉಪಾಧ್ಯಕ್ಷ ಆನಂದ ಎಲ್.ಎಸ್. ನಿರಂತರ ನೀರು ಯೋಜನೆಯ ಇಂಜಿನಿಯರ್ ಅಂಜಿನಪ್ಪಗೆ ಸೂಚಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಜಂಬುನಾಥ ತಾರೀಹಳ್ಳಿ, ಡಿಎಚ್‌ಒ ಸಲೀಂ, ನಗರಸಭೆ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಗುರುವಾರ ವಾರ್ಡ್‌ಗೆ ಭೇಟಿ ನೀಡಿ, ಪರಿಶೀಲಿಸಿ, ಮಾತನಾಡಿದರು.
ಬಡಾವಣೆಯಲ್ಲಿ ಸೋರಿಕೆಯಾಗುವ ಸ್ಥಳ, ಕಲುಷಿತ ನೀರು ಸೇರುವ ಸ್ಥಳ ಪತ್ತೆಯಾಗಿದ್ದು, ಎಲ್ಲವನ್ನೂ ದುರಸ್ತಿಗೊಳಿಸಲಾಗಿದೆ. ಸದ್ಯ ಎಲ್ಲೂ ಕಲುಷಿತ ನೀರು ಪೂರೈಕೆಯಾಗುತ್ತಿಲ್ಲ ಎಂದು ನಗರಸಭೆ ಜೆಇ ಖಾಜಾ ಹುಸೇನ್ ಖಾಜಿ ವಿವರಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ಎಲ್ಲ ಕಡೆಯಿಂದ ಪ್ರತ್ಯೇಕ ನೀರಿನ ಮಾದರಿ ಸಂಗ್ರಹಿಸಿ, ಬೇರೆ ಬೇರೆ ಪ್ರಯೋಗಾಲಯಗಳಲ್ಲಿ ಪರಿಶೀಲಿಸಿದರೆ ನೈಜ ಸ್ಥಿತಿ ಗೊತ್ತಾಗುತ್ತದೆ ಎಂದರು. ಉಪಾಧ್ಯಕ್ಷ ಆನಂದ ಎಲ್.ಎಸ್. ಮಾತನಾಡಿ, ಮುಂದಿನ ಸೂಚನೆ ಬರುವವರೆಗೆ ಸಾರ್ವಜನಿಕರು 24*7 ಕೊಳವೆ ಮಾರ್ಗದಲ್ಲಿ ಪೂರೈಕೆಯಾಗುವ ನೀರನ್ನು ಕುಡಿಯಲು ಉಪಯೋಗಿಸಬಾರದು ಎಂದು ಮೈಕ್‌ಗಳಲ್ಲಿ ತಿಳಿವಳಿಕೆ ನಿಡಬೇಕು ಎಂದು ಸೂಚಿಸಿದರು.
ನೀರು ಕುಡಿಯಲು ಯೋಗ್ಯವಲ್ಲ: ನಗರದ ಸಿದ್ದಲಿಂಗಪ್ಪ ಚೌಕಿ ಪ್ರದೇಶದ ನೀರು ಕುಡಿಯಲು ಯೋಗ್ಯವಲ್ಲ ಎಂದು ನಗರ ಕುಟುಂಬ ಕಲ್ಯಾಣ ಕೇಂದ್ರದ ವರದಿಯಲ್ಲಿ ಉಲ್ಲೇಖಿಸಿದೆ.ಜ.17 ರಂದು ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಗುರುವಾರ ಸಂಜೆ ಬಂದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.