

ಹೊಸಪೇಟೆ: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.01 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಕನ್ನಡಾಂಬೆ ಶ್ರೀಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕನ್ನಡಿಗರ ನಾಡ ಹಬ್ಬ ರಾಜ್ಯೋತ್ಸವ ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಧ್ವಜಾರೋಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಷ್ಟಚಾರವಾಗಿ ಆಚರಿಸಲು ಸೂಕ್ತ ಕ್ರಮವಹಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಮಾತನಾಡಿ, ಕನ್ನಡ ಪರ ಸಂಘಟನೆಗಳಿAದ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದಿಂದ ಕನ್ನಡ ಜ್ಯೋತಿಯನ್ನು ತರುವ ಮೂಲಕ ಜಿಲ್ಲಾ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗಳಲ್ಲಿ ಅಕ್ಷರಗಳನ್ನು ಶೇ.60 ರಷ್ಟು ಅಳತೆಯಲ್ಲಿ ನಮೂದಿಸುವಲ್ಲಿ ಅನೇಕರು ವಿಫಲರಾಗಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜಿಲ್ಲಾಕ್ರೀಡಾಂಗಣದಲ್ಲಿ ತಾಯಿ ಭುವನೇಶ್ವರ ವಿಗ್ರಹ ಪ್ರತಿಷ್ಠಾಪಿಸಬೇಕು ಎಂದು ಕನ್ನಡ ಪರ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು.
ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಎಎಸ್ಪಿ ಟಿ.ಮಂಜುನಾಥ, ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳ÷್ಪಗೌಡ್ರ್, ಜಂಟಿ ಕೃಷಿ ನಿರ್ದೇಶಕ ಟಿ.ಮಂಜುನಾಥ, ತೋಟಗಾರಿಕೆ ಇಲಾಖೆ ಪಿ.ಜಿ.ಚಿದಾನಂದ, ಡಿಎಚ್‌ಒ ಡಾ.ಎಲ್.ಆರ್.ಶಂಕರನಾಯ್ಕ, ನಗರಸಭೆ ಪೌರಾಯುಕ್ತ ಶಿವಕುಮಾರ್ ಯರಗುಡಿ, ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಕೆ.ರವಿಕುಮಾರ್ ಇತರರಿದ್ದರು.