ಭಾರೀ ಮಳೆ ಜನಜೀವನ ಅಸ್ತವ್ಯಸ್ತ

12 MANJU 01
Published on

ಹೊಸಪೇಟೆ: ಜಿಲ್ಲೆಯಲ್ಲಿ ಬುಧವಾರ ಹಾಗೂ ಗುರುವಾರ ಸುರಿದ ಧಾರಾಕಾರ ಮಳೆಗೆ 35 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎರಡು ಮನೆಗಳು ಬಿದ್ದಿವೆ. ಇನ್ನೂ ಕಮಲಾಪುರ ಕೆರೆ ಕೋಡಿ ಬಿದ್ದಿದ್ದು, ರೈತರ ಗದ್ದೆಗಳಿಗೆ ನೀರು ಹರಿಯುತ್ತಿದೆ.

ಜಿಲ್ಲೆಯಲ್ಲಿ 3 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 22.6 ಮಿ.ಮೀ. ಮಳೆಯಾಗಿದೆ. ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜೂ.13ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯ ಹರಪನಹಳ್ಳಿಯಲ್ಲಿ 20 ಹೆಕ್ಟೇರ್ ಮೆಕ್ಕೋಳ ಮತ್ತು ರಾಗಿ ಬೆಳೆ ಹಾನಿಗೀಡಾಗಿದ್ದರೆ, ಕೊಟ್ಟೂರಿನಲ್ಲಿ 15 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಇನ್ನೂ ಹಂಪಿ, ಕಮಲಾಪುರ ಪ್ರದೇಶದಲ್ಲಿ ಬಾಳೆ, ಕಬ್ಬು ಹಾಗು ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಗರದಲ್ಲಿ ಜನಜೀವನ ಕೂಡ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ರಸ್ತೆಗಳಲ್ಲಿ ನೀರು ನಿಂತಿದೆ. ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನ ಕಡ್ಡಿರಾಂಪುರ, ವೆಂಕಟಾಪುರ ಕ್ಯಾಂಪ್, ಬುಕ್ಕಸಾಗರ ಭಾಗದಲ್ಲೂ ಕೆಲ ಮನೆಗಳಿಗೆ ನೀರು ನುಗ್ಗಿದೆ. ಕೆರೆ ತಾಂಡಾ ಹಾಗೂ ಹೊಸಮಲಪನಗುಡಿ ಗ್ರಾಮದ ನಡುವಿನ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದ್ದು, ರೈತರು ಹಾಗು ಕೃಷಿ ಕೂಲಿಕಾರ್ಮಿಕರು ಹೊಲ, ಗದ್ದೆಗಳಿಗೆ ತೆರಳಲು ಪರದಾಡುವಂತಾಗಿದೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಗಳಿಗೂ ನೀರು ಹರಿದು ಬರತೊಡಗಿದೆ. ಈಗಾಗಲೇ ಜಿಲ್ಲಾಡಳಿತ ಕೂಡ ಆರೆಂಜ್ ಅಲರ್ಟ್ ಘೋಷಿಸಿದ್ದು, ರೈತರು ಹಾಗು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಿದೆ.

ರಾಯರಕೆರೆ ಪ್ರದೇಶದಲ್ಲಿ ಬೆಳೆ ಜಲಾವೃತ

ನಗರದ ಹೊರವಲಯದ ಜಂಬುನಾಥನಹಳ್ಳಿ ಪ್ರದೇಶದ ರಾಯರ ಕೆರೆ ಭಾಗದಲ್ಲಿ ಬೆಳೆದು ನಿಂತಿರುವ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದ್ದು, ಜಲಾವೃತವಾಗಿದೆ. ರೈತರು ಪರದಾಡುವಂತಾಗಿದೆ. ಈ ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, ಮಳೆ ನೀರಿನ ಜತೆಗೆ ಮೈನಿಂಗ್ ಗುಡ್ಡದಿಂದ ಹರಿದು ಬಂದ ನೀರು ನಿಂತುಕೊAಡು ಕೆಂಪು ಸಮುದ್ರದಂತಾಗಿದೆ. ನೀರು ಹರಿದು ಹೋಗೋದಕ್ಕೆ ಸರಿಯಾದ ಮಾರ್ಗವಿಲ್ಲದೇ ನಿಂತುಕೊAಡಿದ್ದು, ನೀರು ಹೊರಕಳುಹಿಸಲು ರೈತರು ಪರದಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net