

ಹೊಸಪೇಟೆ: ಬರದ ನಾಡಿನಲ್ಲೀಗ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆಯಿಂದ ಜನರಿಗೆ ಮಲೆನಾಡ ಅನುಭವವಾಗುತ್ತಿದೆ.
ಕಳೆದ ಮಾರ್ಚ್ 20ರಿಂದ ಜಿಲ್ಲೆಯಲ್ಲಿ ಆರಂಭವಾದ ಅಕಾಲಿಕ ಮಳೆ. ಏಪ್ರೀಲ್ ತಿಂಗಳಲ್ಲಿ 47.5 ಮಿಮೀ ಮಳೆಯಾಗಿದೆ. ಈ (ಮೇ) ತಿಂಗಳ ಆರಂಭದಿAದ ಇಲ್ಲಿಯ ವರೆಗೆ 105 ಮಿಮೀ ಮಳೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಆಗಾಗಾ ಮಳೆ ಸುರಿಯುತ್ತಿದೆ. ಭಾನುವಾರ ಬೆಳಗ್ಗೆ 8ಗಂಟೆಯಿAದ ಸೋಮವಾರ ಬೆಳಗ್ಗೆ 8ರ ವರೆಗೆ 4 ಮಿಮೀ ಮಳೆಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ 8 ಮೀಮಿ ಮಳೆಯಾಗಿದೆ. ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಆಗಾಗ ತುಂತು ಮಳೆ ಜತೆ ಬಿರುಸಿನ ಮಳೆ ಕೂಡ ಆಗಿದೆ. ನಂತರ ಬಿಡುವು ಕೊಟ್ಟ ಮಳೆರಾಯ ಮೋಡಕವಿದ ವಾತಾವರಣ ಮುಂದು ವರೆದಿತ್ತು. ಜಿಲ್ಲೆಯ ಹಲವು ಕಡೆ ತುಂತುರು ಮಳೆಯಾಗಿದೆ.
ಬಿಸಿಲೂರು ಎಂದೇ ಖ್ಯಾತಿಯಾಗಿದ್ದ ಜಿಲ್ಲೆಯಲ್ಲೀಗ ಮಳೆಯ ಸಿಂಚನ ಮುಂದುವರಿದಿದೆ. ಹೆಚ್ಚು ಬಿಸಿಲು ಕಾಣುವ ಜನರಿಗೆ ಮೇಲಿಂದ ಮೇಲೆ ಮಳೆಯ ಸಿಂಚನದಿAದ ಸಂತಸ ಮೂಡಿಸಿದೆ. ಮೂರ್ನಾಲ್ಕು ದಿನದಿಂದ ರಾತ್ರಿ ವೇಳೆ ಮಳೆ ಸುರಿದರೂ ಹಗಲೆಲ್ಲ ಸುಡುವ ಸೂರ್ಯ ಮಾಯವಾಗಿ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿರುತ್ತದೆ. ಹಗಲು ಆಗಾಗ ಮಳೆ ಬೀಳುತ್ತದೆ. ಕೆಲಸ ಕಾರ್ಯಗಳಿಗೆ ತೊಡಗಿದ ಸಂದರ್ಭದಲ್ಲಿ ಮಳೆ ಬಂತು ಎಂದು ಆಶ್ರಯ ಪಡೆಯುತ್ತಿದ್ದಂತೆ ಮತ್ತೇ ಮಾಯವಾಗುತ್ತದೆ. ಮಳೆ ನಿಂತಿತು ಎಂದು ಕೆಲಸ ಮುಂದುವರಿಸಿದರೆ ತುಂತುರು ಶುರುವಾಗುತ್ತದೆ. ಮನೆಯ ಮುಂದೆ ನೆಟ್ಟ ಸಸಿಗಳು, ಬೆಟ್ಟಗಳ ಮಧ್ಯೆ ಬೆಳೆದ ಮರಗಿಡಗಳು ಮಳೆ ಸಿಂಚನದಿAದ ಹಸಿರು ವನದಂತಾಗಿದೆ. ಎಲ್ಲೆಲ್ಲೂ ಹಸಿರು ಚಿಗುರೊಡೆದು ಕಣ್ಮನ ಸೂರೆಗೊಳ್ಳುತ್ತಿದೆ.
ಸುಡುವ ಸೂರ್ಯನಿಂದ ಬಿಸಿಲು ಹಾಗೂ ಬೆವರು ಅನುಭವಿಸುತ್ತಿದ್ದ ಜನರಿಗೆ ಚಳಿಯ ವಾತಾವರಣ ತಟ್ಟುತ್ತಿದೆ. ಬೆಳಗ್ಗೆ 8 ಗಂಟೆಯಿAದಲೇ ಮೈಸುಡುವ ಬಿಸಿಲು ಹಾಗೂ ಮೈಮೇಲೆ ಹರಿಯ ತೊಡಗಿದ್ದ ಬೆವರಿನಿಂದ ಜನರು ಬೇಸತ್ತು ಬಿಸಿಲೆಂದರೆ ಭಯ ಆವರಿಸುತ್ತಿತ್ತು. ಮೂಲೆ ಸೇರಿದ್ದ ಜರ್ಕಿನ್, ಸ್ವೆಟರ್ ಬಯಲಿಗೆ ಬರತೊಡಗಿವೆ.
ಮತ್ತೊಂದೆಡೆ ಬೇರೆ ಎಲ್ಲೋ ಸುರಿದ ಮಳೆಗೆ ಹರಿದು ಬರುತ್ತಿರುವ ನೀರು ಹಳ್ಳ, ಕೊಳ್ಳಗಳನ್ನೆಲ್ಲ ಭರ್ತಿ ಮಾಡುತ್ತಿವೆ. ತಾಲೂಕಿನ ಕಮಲಾಪುರ ಕೆರೆಯ ಕೊಡಿ ಬಿದ್ದು ಅಪರ ಪ್ರಮಾಣದ ನೀರು ಹೊರಗೆ ಹೋಗುತ್ತಿದೆ. ಇನ್ನು ಕೆಲ ಕಡೆಯ ಹಳ್ಳಕೊಳ್ಳಗಳು ಮುಂಗಾರು ಮುನ್ನವೇ ಭತಿಯಾಗುತ್ತಿವೆ. ಇವುಗಳಿಂದ ಸಾವಿರಾರು ಎಕರೆ ಜಮೀನಿಗೆ ನೀರೊದಗಿಸಲು ಸಾಧ್ಯವಾಗಲಿದೆ.
ಜಿಲ್ಲೆಯಲ್ಲಿ ಏಪ್ರೀಲ್ ತಿಂಗಳಿAದಲೇ ಮಳೆ ಆರಂಭವಾಗಿದೆ. ಬೆಟ್ಟಗುಡ್ಡಗಳು, ಗೋಮಾಳು, ರಸ್ತೆ ಬದಿ ಸೇರಿದಂತೆ ಬಯಲು ಪ್ರದೇಶಗಳಲ್ಲಿ ಗರಿಕೆ ಚಿಗುರಿದ್ದು, ಮರ-ಗಿಡಗಳು ಹಸಿರು ಹೊದ್ದಿವೆ. ಇದರಿಂದ ಕುರಿಗಾಯಿಗಳಿಗೆ ಕುರಿ, ಆಡು ಹಾಗೂ ದನಕರುಗಳನ್ನು ಮೇಯಿಸಲು ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೇವಿನ ಕೊರತೆ ಕಾಡುವ ಮೊದಲೇ ಮಳೆ ಸುರಿದಿರುವುದರಿಂದ ಜಾನುವಾರು ಮಾಲೀಕರು ನಿಟ್ಟಿಸಿರು ಬಿಟ್ಟಿದ್ದಾರೆ. ಬೆಟ್ಟಗುಡ್ಡಗಳಲ್ಲಿ ದನಕರುಗಳನ್ನು ಮೇಯಿಸಿಕೊಂಡು, ಹಳ್ಳ ಹಾಗೂ ಕೆರೆಗಳಲ್ಲಿ ನೀರು ಕುಡಿಸಿ ಮನೆಗಳಿಗೆ ಮರಳುತ್ತಿದ್ದಾರೆ.