ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ

29 MANJU 02
Published on

ಹೊಸಪೇಟೆ: ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ವಿಜಯನಗರ ಜಿಲ್ಲೆಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದು ರೈತರಿಗೆ ಅಪಾರ ನಷ್ಟ ಸಂಭವಿಸಿದೆ. 94 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದೇ ವೇಳೆ ನಾಲ್ಕು ಜನರು ಸೇರಿ 23 ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ.

ಜಿಲ್ಲೆಯಲ್ಲಿ ಏ.10ರಂದು ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡ ಗ್ರಾಮದ ಪಾಂಡುನಾಯ್ಕ(16) ಬಾಲಕ ಸಿಡಿಲಿಗೆ ಒದಲ ಬಲಿಯಾದರು. ಏ.18ರಂದು ಹರಪನಹಳ್ಳಿ ತಾಲೂಕಿನ ಹುಣಿಸಿಕಟ್ಟೆ ಗ್ರಾಮದಲ್ ಎಚ್.ಬಸವರಾಜಪ್ಪ, ಏ.26 ರಂದು ಹೂವಿನಹಡಗಲಿಯ ಹರವಿ ಬಸಾಪುರ ಗ್ರಾಮದ ರವಿಕುಮಾರ ಚೌಟಗಿ ಹಾಗೂ ಏ.27ರಂದು ಹರಪನಹಳ್ಳಿಯ ತೆಲಗಿ ಗ್ರಾಮದ ಚನ್ನಗಿರಿ ಹಾಲೇಶಪ್ಪ ಸಿಡಿಲು ಬಡಿದು ಮೃತರಾಗಿದ್ದಾರೆ. ಇನ್ನು ನಾಲ್ಕು ಜನ ಸಿಡಿಲಿಗೆ ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ 8 ದೊಡ್ಡ ಜಾನುವಾರು, 15 ಸಣ್ಣ ಜಾನುವಾರುಗಳುನ್ನು ಪೂರ್ವ ಮೂಂಗಾರು ಬಲಿ ತೆದುಕೊಂಡಿದೆ.

ವಿಜಯನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯ ಏ.01ರಿಂದ ಏ.28ರ ವರೆಗೆ ಒಟ್ಟು ಜಿಲ್ಲೆಯ ವಾಡಿಕೆ ಮಳೆಗಿಂತ ಶೇ.66 ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆ ಮಳೆ 27.7 ಮಿಲಿ ಮೀಟರ್‌ಗಿಂತ 45.9 ಮಿ.ಮೀ ಮಳೆಯಾಗಿದೆ. ಇನ್ನೂ ಜ.1ರಿಂದ ಏ.28ರ ವರೆಗೆ ವರೆಗಿನ ವಾಡಿಕೆ ಮಳೆ 35.2 ಮಿ.ಮೀ ಇದ್ದು, 47.6 ಮಿ.ಮೀ ಮಳೆಯಾಗುವ ಮೂಲಕ ಶೇ.35 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ 15.33 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದೆ. ಇನ್ನೂ 77.795 ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಒಟ್ಟು 94 ಹೆಕ್ಟೇರ್ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಈ ರೀತಿ ಹೆಚ್ಚು ಮಳೆಯಾಗುತ್ತಿರುವುದರ ಪರಿಣಾಮದಿಂದಾಗಿ ಮನೆಗಳಿಗೆ ಹಾನಿ, ಬೆಳೆ ನಷ್ಟ, ವಿದ್ಯುತ್‌ಗೆ ಸಂಬAಧಿಸಿ ಸಮಸ್ಯೆಗಳು ಎದುರಾಗಿವೆ. ಇನ್ನೂ ಮುಂಗಾರು ಅಬ್ಬರಿಸುವ ಸಾಧ್ಯತೆಯಿದ್ದು, ಮತ್ತಷ್ಟು ಅನಾಹುತಗಳಿಗೆ ಮುಂಗಾರು ಕಾರಣವಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿನ ನಾಲ್ಕು ಜೀವ ಹಾನಿಯಾಗಿದೆ. ಇನ್ನೂ 23ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಇದರ ಜತೆಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ 9 ಮನೆಗಳು ಹಾನಿಯಾಗಿದೆ. ಕೊಟ್ಟೂರು, ಹರನಹಳ್ಳಿ ತಲ ಎರಡು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ತಲ ಒಂದು ಮನೆ ಹಾನಿಗೊಳಗಾಗಿದೆ. ಒಟ್ಟು 15 ಮನೆಗಳಿಗೆ ಹಾನಿ ಉಂಟಾಗಿದ್ದು, ಇನ್ನೆಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬುದು ವರದಿಯಿಂದ ತಿಳಿಯಬೇಕಾಗಿದೆ. ಪೂರ್ವ ಮುಂಗಾರು ಮಳೆ ಒಂದು ರೀತಿಯಲ್ಲಿ ಜಿಲ್ಲೆಯ 6 ತಾಲೂಕುಗಳಲ್ಲಿನ ವಿದ್ಯುತ್ ಕಂಬಗಳನ್ನೇ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಜತೆಗೆ ಟ್ರಾನ್ಸ್ಫಾರ್ಮರ್‌ಗಳು ಕೂಡ ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ಕ್ರಮವಹಿಸಿದ್ದು, ಅವುಗಳನ್ನು ಬದಲಾಯಿಸುವ ಕೆಲಸ ಮಾಡಲಾಗಿದೆ.

5 ಲಕ್ಷ ರೂ. ಪರಿಹಾರ

ಜಿಲ್ಲೆಯಲ್ಲಿ ಈ ತಿಂಗಳು ನಾಲ್ಕು ಜನರು ಸಿಡಿಲಿಗೆ ಮೃತಪಟ್ಟಿದ್ದಾರೆ. ಇವರ ಕುಟುಂಬಸ್ಥರಿಗೆ ಈಗಾಗಲೇ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಜಾನುವಾರುಗಳು ಮೃತ ಪಟ್ಟಿದ್ದು, ನಿಯಮಾನುಸಾರ ಸದರಿ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯವಾಣಿಗೆ ಮಾಹಿತಿ ನೀಡಿದರು.

ಗುಡುಗು-ಸಿಡಿಲು ಹೊರಬರಬೇಡಿ

ಈ ಬಾರಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ಕಳೆದ ಏ.01ರಿಂದ ಇಲ್ಲಿವರೆಗೆ ಸರಾಸರಿ 45.9 ಮಿಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆಯಾಗುವ ಮುನ್ಸೂಚನೆಯಿದ್ದು ಮಳೆ, ಗುಡುಗು-ಸಿಡಿಲು ಆಗುವ ಸಂದರ್ಭದಲ್ಲಿ ಸಾರ್ವಜನಿಕರು ಹೊರಬರದಂತೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಗುಡುಗು ಸಿಡಿಲು ಹೆಚ್ಚಾಗಿದ್ದು, ನಾಲ್ಕು ಜನ ಸೇರಿ ಜಾನುವಾರುಗಳು ಮೃತಪಟ್ಟಿವೆ. ವಿದ್ಯುತ್ ಕಂಬಗಳು ಸೇರಿದಂತೆ ರೈತರ ಬೆಳೆ ಹಾನಿಯಾಗಿವೆ. ಇವುಗಳಿಗೆ ಪರಿಹಾರ ನೀಡಲಾಗಿದೆ. ಗುಡುಗು ಸಿಡಿಲು, ಬಿರುಗಾಳಿ ಇದ್ದಾಗ ಹೊರಗಡೆ ಬರದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net