ನಿರಂತರ ಮಳೆ ಮಲೆನಾಡ ಅನುಭವ

25 MANJU 04
Published on

ಹೊಸಪೇಟೆ: ಸ್ಮಾರಕಗಳ ನಗರಿ ವಿಜಯನಗರದಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ವಾತವರಣ ತಂಪೆರೆಯಿತು. ಕೆಲ ದಿನಗಳಿಂದ ಬಿಡದೇ ಮಳೆ ಸುರಿದು ಮಲೆನಾಡ ವಾತಾವರಣ ಸೃಷ್ಟಿಸಿದೆ.

ಕಳೆದ ಕೆಲದಿನಗಳಿಂದ ಬೀಳುತ್ತಿರುವ ಮಳೆ ಸಂಪೂರ್ಣ ತಂಪು ವಾತಾ ವರಣವನ್ನುಂಟು ಮಾಡುವುದರ ಜತೆಗೆ ಜನಜೀವನ ಅಸ್ತವ್ಯಸ್ತ ಗೊಳಿಸಿದೆ. ಬೆಳಗ್ಗೆಯಿಂದಲೇ ಕಟವಾದ ಕಪ್ಪು ಮೋಡ ಆವರಿಸಿದ್ದವಲ್ಲದೇ, ಸೂರ್ಯೋದಯಕ್ಕೂ ಮುನ್ನವೇ ಆರಂಭವಾದ ಮಳೆ ಹನಿ ಹನಿಯಾಗಿ ಸುರಿಯುತ್ತಿದೆ. ಮಧ್ಯಾಹ್ನದ ವೇಳೆಗೆ ಕೆಲ ಕಡೆ ಉತ್ತಮ ಮಳೆಯಾದರೆ, ಇನ್ನೂ ಕೆಲ ಕಡೆ ತುಂತುರು ಮಳೆ ಕಣ್ಣಾ ಮುಚ್ಚಾಲೆ ಆಡುತ್ತಲೇ ಇತ್ತು. ಸಂಜೆ ಮತ್ತೆ ಕೆಲ ಕಾಲ ಶುರುವಾದ ಮಳೆ ಮೆಲ್ಲಗೆ ಮುಂದುವರಿದಿತ್ತು. ಇದರಿಂದ ವಿಜಯನಗರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾದಂತಾಗಿತ್ತು.

ನಿರಂತರ ಮಳೆ ಕಾರಣ ರಸ್ತೆಯಲ್ಲಿ ಜನ ಸಂಚಾರ ಅಷ್ಟಾಗಿ ಇರಲಿಲ್ಲ. ಮಾರುಕಟ್ಟೆಗಳು ಸಹ ಭಣಗುಡುತ್ತಿದ್ದವು. ಸಾರಿಗೆ ಸಂಸ್ಥೆ ಬಸ್‌ಗಳಿಗೆ ಹೋಗುವ ಜನರಿಗೆ ನಿಲ್ಲಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಮಳೆಯಲ್ಲಿಯೇ ನಿಂತು ಬಸ್ ಏರುವ ದೃಶ್ಯ ಸಾಮಾನ್ಯವಾಗಿತ್ತು.

ಮಳೆಯಲ್ಲಿ ಮಿಂದೆದ್ದ ಹಂಪಿ

ವಿಶ್ವವಿಖ್ಯಾತ ಹಂಪಿಯಲ್ಲಿ ಸುರಿದ ಮಳೆಗೆ ಹಂಪಿಯ ವೈಭವ ಮತ್ತಷ್ಟು ಇಮ್ಮಡಿಗೊಂಡಿತು. ಮಳೆಯಲ್ಲಿ ಮಿಂದೆದ್ದ ಸ್ಮಾರಕಗಳ ದೃಶ್ಯಗಳು ರಮಣಿಯವಾಗಿತ್ತು. ಮಳೆಯ ಸಿಂಚನದಲ್ಲಿಯೇ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದರು. ಕೃಷ್ಣ ದೇಗುಲ, ಪಾನ್ ಸೂಪಾರಿ ಬಜಾರ್, ಉಗ್ರ ನರಸಿಂಹ, ವಿಜಯವಿಠಲ ದೇಗುಲದ ಆವರಣದಲ್ಲಿ ನೀರು ಸಂಗ್ರಹಗೊAಡಿದೆ. ಮಳೆ ನೀರಿನಲ್ಲಿ ಸ್ಮಾರಕಗಳ ಬಿಂಬ ಗೋಚರಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net