ವಿಜಯನಗರ ಜಿಲ್ಲೆಯಾದ್ಯಂತ ಭಾರಿ‌ ಮಳೆ

18 MANJU 04
Published on

ಹೊಸಪೇಟೆ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹಳ್ಳಕೊಳ್ಳಗಳು ಹುಕ್ಕಿಹರಿದಿವೆ. ಜಿಲ್ಲೆಯಲ್ಲಿ ಎಂಟು ಮನೆಗಳು ನೆಲಕ್ಕುರುಳಿವೆ. ಹಲವು ಬೆಳೆಗೆ ನೀರು ನುಗ್ಗಿವೆ.

ತಾಲೂಕಿನ ಬೆನಕಾಪುರದ ಬಳಿ ರಾಯ ಕಾಲುವೆಯಲ್ಲಿ ಮಳೆ ನೀರು ಸೇರಿ ಕಾಲುವೆ ತುಂಬಿ ಹರಿದು, 50ಕ್ಕೂ ಅಧಿಕ ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿದೆ. ಇನ್ನೂ ಕಮಲಾಪುರ ಕೆರೆ ಕೋಡಿ ಬಿದ್ದಿದೆ.

ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದು, ಕೆಲ ಕಡೆ ಮನೆಗಳಿಗೂ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಎಂಟು ಮನೆಗಳು ಉರುಳಿ ಬಿದ್ದಿವೆ. ಬೆನಕಾಪುರದಲ್ಲಿ 19ನೇ ಕಿಮೀ ಬಳಿ ರಾಯ ಕಾಲುವೆಯಿಂದ ನೀರು ಹರಿದು, ಭತ್ತದ ಗದ್ದೆಗಳಿಗೆ ನುಗ್ಗಿದೆ. 19ನೇ ಕಿಮೀಯಿಂದ 24ನೇ ಕಿಮೀಯ ವರೆಗೆ ಸಮಸ್ಯೆ ಉಂಟಾಗಿದೆ. 50ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರು ನುಗ್ಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬಸವಣ್ಣ ಕಾಲುವೆ ಹಾಗೂ ರಾಯ ಕಾಲುವೆ ನೀರಿನ ಜತೆಗೆ ಗುಡ್ಡದಿಂದ ಹರಿದು ಬರುತ್ತಿರುವ ಮಳೆ ನೀರು ಸೇರಿ ಈ ಅವಘಡ ಸಂಭವಿಸಿದೆ. ಕಾಲುವೆ ನೀರು ಭತ್ತದ ಗದ್ದೆಗಳಿಗೆ ಹರಿದು ಬರುತ್ತಿರುವುದರಿಂದ ರೈತರು, ಶಾಸಕ ಎಚ್‌.ಆರ್‌. ಗವಿಯಪ್ಪನವರ ಗಮನಕ್ಕೆ ತಂದಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶೀಘ್ರ ಕಾರ್ಯಾಚರಣೆ ನಡೆಸಲು ಶಾಸಕರು ಸೂಚಿಸಿದರು.

ಕಮಲಾಪುರ ಕೆರೆ ಮತ್ತೆ ಕೋಡಿಬಿದ್ದು, ಹಂಪಿ, ಕಮಲಾಪುರ ಭಾಗದ ಭತ್ತ, ಬಾಳೆ ಗದ್ದೆಗಳಿಗೆ ನೀರು ಹರಿಯುತ್ತಿದೆ. ಮಳೆಯಿಂದ ಜನರು ಕಂಗಾಲಾಗಿದ್ದಾರೆ. ನಗರದ ಎಂ.ಪಿ. ಪ್ರಕಾಶ್ ನಗರ, ಎಂ.ಜೆ.ನಗರ, ಅರವಿಂದನಗರ ಸೇರಿದಂತೆ ನಗರದ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ನಗರದಲ್ಲಿ 8.7 ಮಿ.ಮೀ. ಮಳೆಯಾಗಿದ್ದು, ಕಮಲಾಪುರದಲ್ಲಿ 39 ಮಿ.ಮೀ., ಮರಿಯಮ್ಮನಹಳ್ಳಿ 23 ಮಿ.ಮೀ., ಹಡಗಲಿಯಲ್ಲಿ 7.9 ಮಿ.ಮೀ., ಹಗರಿಬೊಮ್ಮನಹಳ್ಳಿ 5 ಮಿ.ಮೀ., ಹಂಪಸಾಗರ 11.1 ಮಿ.ಮೀ. ಮಳೆ ದಾಖಲಾಗಿದೆ. ಹರಪನಹಳ್ಳಿಯ ಚಿಗಟೇರಿಯಲ್ಲಿ 3.4 ಮಿ.ಮೀ., ಕೊಟ್ಟೂರಿನಲ್ಲಿ 13.1 ಮಿ.ಮೀ., ಕೂಡ್ಲಿಗಿಯಲ್ಲಿ 7.9 ಮಿ.ಮೀ. ಮಳೆಯಾದರೆ, ಹೊಸಹಳ್ಳಿಯಲ್ಲಿ 18 ಮಿ.ಮೀ. ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net