ಹಿಂಗಾರು ಮಳೆ ಭರ್ಜರಿ ಆರಂಭ

05 MANJU 03
Published on
  • ಮುಗಿದ ಮುಂಗಾರು, ಹಿಂಗಾರು ಬಿತ್ತನೆ ಶುರು, ರೈತರಲ್ಲಿ ಮೂಡಿದ ಭರವಸೆ

ಹೊಸಪೇಟೆ: ಹಿಂಗಾರು ಭರ್ಜರಿ ಪ್ರವೇಶ ನೀಡಿದ್ದು ಜಿಲ್ಲಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆ ವರೆಗೆ ಭಾರಿ ಮಳೆಯಾಗಿದೆ. ಮುಂಗಾರು ಮುಗಿದು, ಹಿಂಗಾರು ಬಿತ್ತನೆ ಶುರುವಾಗಲಿದ್ದು, ಆರಂಭದಲ್ಲಿಯೇ ಮಳೆ ಬೀಳುತ್ತಿರುವುದರಿಂದ ಭೂಮಿ ತನುವಾಗಿ ಬೆಳೆಗಳು ಮೊಳಕೆ ಚೆನ್ನಾಗಿ ಬರುತ್ತವೆ. ಈ ಹಂಗಾಮು ಕೂಡ ಉತ್ತಮವಾಗಿರಲಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆ.

ಜಿಲ್ಲೆಯಲ್ಲಿ ಸರಾಸರಿ 29.28 ಮಿಮೀ ಮಳೆ ಸುರಿದಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 45 ಮನೆಗಳು, ಹಾಗೂ ಕೂಡ್ಲಿಗಿಯಲ್ಲಿ 3 ಹೆಕ್ಟೇರ್ ಬೆಳೆ ನಷ್ಟವಾಗಿವೆ. ಹೊಸಪೇಟೆ ಸೇರಿದಂತೆ ಇತರೆ ಕಡೆ ಕೃಷಿ ಜಮೀನುಗಳಿಗೆ ಮಳೆ ನೀರು ನುಗ್ಗಿದ್ದು, ಹಾನಿ ಇನ್ನೂ ತಿಳಿದು ಬಂದಿಲ್ಲ. ಜಿಲ್ಲೆಯಲ್ಲಿ ಬಹಳ ದಿನಗಳ ನಂತರ ಜಿಲ್ಲಾದ್ಯಂತ ವ್ಯಾಪಕ ಹದ ಮಳೆಯಿಂದ ಹಿಂಗಾರು ಪ್ರವೇಶ ಭರವಸೆ ಮೂಡಿಸಿದೆ. ಈಗಾಗಲೇ ಕೆಲವೆಡೆ ಸುಗ್ಗಿ ಆರಂಭವಾಗಿದೆ. ಇನ್ನು ಹಿಂಗಾರು ಹಂಗಾಮಿನ ಕೃಷಿ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸುಮಾರು 56.67 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬೆಳೆಗಳು ಬಿತ್ತನೆ ಆಗಲಿವೆ.

ಭಾನುವಾರ ತಡ ರಾತ್ರಿಯಿಂದ ಆರಂಭವಾಗಿ ಮುಂಜಾನೆ 5 ಗಂಟೆಯವರೆಗೂ ಜಿಲ್ಲೆಯಲ್ಲಿ ಮಳೆ ಸುರಿದಿದೆ. ವಿಜಯನಗರ ಜಿಲ್ಲೆಯಲ್ಲಿ ಹಲವೆಡೆ ಗುಡುಗು, ಸಿಡಿಲಿನ ಜತೆ ಹದ ಮಳೆಯಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ 90.46 ಮಿಮೀ ಮಳೆಗೆ ಹೊಸಳ್ಳಿಯಲ್ಲಿ ಮಾತ್ರ 117.20 ಮಿಮೀ ಮಳೆಯಾಗಿದೆ. ಇನ್ನೂ ಹೊಸಪೇಟೆ ತಾಲೂಕಿನಲ್ಲಿ 43.23 ಮಿಮೀ ಮಳೆಯಾದರೆ, ಕೊಟ್ಟೂರು 18.40 ಮಿಮೀ, ಹಗರಿಬೊಮ್ಮನಹಳ್ಳಿ 15 ಮಿಮೀ, ಹರಪನಹಳ್ಳಿ 7.41 ಮಿಮೀ ಮಳೆಯಾಗಿದೆ. ಹೂವಿನಹಡಗಲಿಯಲ್ಲಿ 1.20 ಮಿಮೀ ಮಾತ್ರ ಮಳೆಯಾಗಿದೆ. ಇನ್ನೂ ಈ ತಿಂಗಳು ಐದು ದಿನದಲ್ಲಿ 39.20 ಮಿಮೀ ಸರಾಸರಿ ಮಳೆಯಾಗಿದೆ ಎಂದು ವರದಿಯಾಗಿದೆ.

ಬಿತ್ತನೆಗೆ ಸಿದ್ದತೆ

ವ್ಯಾಪಕ ಮಳೆಯಾಗಿದ್ದು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗಿ ಸುಗ್ಗಿ ಆರಂಭವಾಗಿರುವ ಕಡೆ ಮಳೆಯಿಂದ ಕೊಂಚ ತೊಂದರೆ ಆಗಿದೆ. ಇದರ ಜತೆ ಅ10. ಹಿಂಗಾರು ಮಳೆ ಆರಂಭವಾಗಲಿದ್ದು, ಬಿತ್ತನೆ ಆರಂಭವಾಗಲಿದ್ದು. ಮಳೆಯಿಂದ ಬಿತ್ತನೆ ಚುಟುವಟಿಕೆಗಳು ಆರಂಭ ಆಗಲಿವೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಊಟದ ಜೋಳ, ರಾಗಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಲಿದೆ. ಪ್ರಮುಖವಾಗಿ ಬಯಲು ಸೀಮೆಯಲ್ಲಿ ಕಾಳುಗಳನ್ನು ಹೆಚ್ಚಿಗೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲೂ ಈ ಬಾರಿ ಕಾಳುಗಳು ಸೇರಿ 56674 ಹೆಕ್ಟೇರ್‌ನಲ್ಲಿ ನಾನಾ ಆಹಾರ ಧಾನ್ಯಗಳ ಮತ್ತು ಎಣ್ಣೆ ಕಾಳುಗಳ ಬಿತ್ತನೆ ಗುರಿ ಹೊಂದಲಾಗಿದೆ. ಹಿಂಗಾರು ಆರಂಭದಲ್ಲಿಯೇ ಉತ್ತಮ ಮಳೆ ಬಂದಿರುವುದರಿAದ ಬಿತ್ತನೆಗೆ ರೈತರ ರಟ್ಟೆಗೆ ಕಸುವು ತುಂಬಿದAತಾಗಿದೆ. ಮುಂಗಾರು ಬೆಳೆ ಬಿತ್ತನೆ ಮಾಡಿರುವವರು ಸುಗ್ಗಿ ಮುಗಿಸಿ ಹಿಂಗಾರಿಗೆ ಸಿದ್ಧತೆ ಕೈಗೊಂಡಿದ್ದಾರೆ.

ಸುಗ್ಗಿಗೆ ತೊಂದರೆ

ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟೂರು ಸೇರಿದಂತೆ ಜಿಲ್ಲೆಯ ಹಲವು ಭಾಗದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ, ಶೇಂಗಾ, ಜೋಳ, ಸೂರ್ಯಕಾಂತಿ ಮತ್ತು ಈರುಳ್ಳಿ ಕಟಾವು ಆರಂಭವಾಗಿದ್ದು, ಮಳೆಯಿಂದ ಕೊಂಚ ತೊಂದರೆ ಆಗಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಬಿತ್ತನೆ ಶುರುವಾಗಲಿದ್ದು, ಈಗ ಮಳೆ ಸುರಿದಿರುವುದು ಉತ್ತಮ ಆರಂಭದ ಲಕ್ಷಣವಾಗಿದೆ. ಮುಂಗಾರಿನAತೆ ಹಿಂಗಾರು ಕೂಡ ಭರವಸೆ ಮೂಡಿಸಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net