

ಹೊಸಪೇಟೆ: ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಕಾಮಗಾರಿ ಕಳಪೆಯಾದರೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರಿಂದ ಸರಿಯಾದ ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರರು ಹಣ ಉಳಿಸಿಕೊಳ್ಳಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ, ಕಟ್ಟಡಗಳನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕಾಮಗಾರಿಯ ಸ್ಥಳಗಳಿಗೆ ಖುದ್ದು ಬೇಟಿ ನೀಡಬೇಕು ಎಂದು ಸೂಚಿಸಿದರು.
ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿದ ನಂತರ ಯಾವುದೇ ಕಾರಣಕ್ಕೂ ದೂರುಗಳು ಬರದಂತೆ ಕಾರ್ಯ ನಿರ್ವಹಿಸಿರಿ. ಯಾವುದೇ ಕಾಮಗಾರಿಯಾಗಿದ್ದರೂ ಅದರ ಮೊದಲು, ನಂತರದ ಹಾಗೂ ಅಂತಿಮ ವರದಿಯನ್ನು ಛಾಯಾಚಿತ್ರ ಹಾಗೂ ವಿಡಿಯೊ ತುಣುಕುಗಳ ಸಮೇತ ಸಚಿವಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ಬಾರಿ ರಸ್ತೆ ಕಾಮಗಾರಿ ಮಾಡಿದರೆ, ಅದು ಕನಿಷ್ಠ 10 ವರ್ಷವಾದರೂ ಬಾಳಿಕೆ ಬರುವಂತಿರಬೇಕು. ರಸ್ತೆಗಳು ಅತಿಕ್ರಮಣವಾಗದಂತೆ, ರಸ್ತೆ ಮಧ್ಯದಲ್ಲಿ ಚರಂಡಿ ನೀರು ಅಥವಾ ಮಳೆ ನೀರು ನಿಲ್ಲದಂತೆ ಸಂರಕ್ಷಿಸಬೇಕು. ಕ್ರೀಡಾಂಗಣ, ಗ್ರಂಥಾಲಯದAತಹ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಬೇಕು ಎಂದರು.
ಶಾಸಕರಾದ ಎಚ್.ಆರ್.ಗವಿಯಪ್ಪ, ಎನ್.ಟಿ.ಶ್ರೀನಿವಾಸ, ನೇಮಿರಾಜ್ ನಾಯ್ಕ, ಕೃಷ್ಣನಾಯ್ಕ ಮಾತನಾಡಿ, ನಮ್ಮ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಇಲ್ಲಿ ಸಣ್ಣ ಮಳೆ ಬಂದರೆ ಸಾಕು ಸಮಸ್ಯೆಗಳ ಸರಮಾಲೆ ಕಾಣುತ್ತವೆ. ಪ್ರಮುಕಡೆ ಸೇತುವೆಗಳ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಮೈಲಾರ, ಕೊಟೂರು ಸೇರಿದಂತೆ ಇತರೆ ಕಡೆ ಧಾರ್ಮಿಕ ಕ್ಷೇತ್ರಗಳಿಗೆ. ಜಾತ್ರೆ ವೇಳೆ ಜನ ಸಾಗರ ಹರಿದು ಬರುತ್ತದೆ ಇಲ್ಲಿ ರಸ್ತೆಗಳ ಅಭಿವೃದ್ಧಿ ಅವಶ್ಯಕತೆಯಿದೆ. ಪ್ರಮುಖ ಕಡೆ ಪರಿವೀಕ್ಷಣ ಮಂದಿರದ ಬೇಡಿಕೆ ಹೆಚ್ಚಿದೆ. ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ನಡೆಸಿ ಜಿಲ್ಲೆಯ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸತೀಶ್ ಜಾರಕಿಹೋಳಿ ಪ್ರತಿಕ್ರಿಯೆ ನೀಡಿ, ಇಲಾಖೆಯಲ್ಲಿ ಎಲ್ಲೋ ಸಮಸ್ಯೆ ಇದೆ. ಈ ಸಾಲಿನಲ್ಲಿ ಸರಿ ಪರಿಸುವ ಪ್ರಯತ್ನ ನಡೆಸಲಾಗುತ್ತದೆ. ಇಲ್ಲಿ ಪಾರ್ಟಿ ಮುಖ್ಯ. ಅಭಿವೃದ್ಧಿ ನಮ್ಮ ಸಂಕಲ್ಪ. ಪ್ರವಾಸೋದ್ಯಮ ಇರುವುದರಿಂದ ಇಲ್ಲಿ ಕೂಡ ಐಬಿ ಮಾಡುತ್ತೇವೆ. ಹೈವೆ ಫಾಲೋಪ್ ಮಾಡಿ ಕೆಲಸ ಮಾಡಿಕೊಳ್ಳಬೇಕು. ಎಇಇ ಪಾತ್ರ ಬಹಳ ಮುಖ್ಯ. ಶಾಸಕರ ಜತೆ ಉತ್ತಮ ಕಮ್ಯುನಿಕೇಶನ್ಸ್ ಮಾಡಿಕೊಂಡು ಕ್ಷೇತ್ರಗಳ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಬೇರೆ ರಾಜ್ಯಗಳಿಗೆ ಮಾದರಿ ಆಗಬೇಕಿದೆ ತಮ್ಮ ರಸ್ತೆಗಳು ಎಂದರು.
ಯಾವುದೇ ಒಂದು ಫೈಲ್ ನನ್ನ ಕಚೇರಿಗೆ ಬಂದರೆ, ಒಂದೇ ದಿನದೇ ದಿನದಲ್ಲಿ ನೋಡಿ ಕಳಿಸುತ್ತೇನೆ. ಆದರೆ ಪಿಡಬ್ಲೂö್ಯಡಿ ಅಧಿಕಾರಿಗಳು ಸುಳ್ಳು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸಭೆಗೆ ನೀಡಿರುವ ವರದಿ ಕೂಡ ಸುಳ್ಳಲಾಗಿದೆ, ಆದ್ದರಿಂದ ಸಕಾಲದ ರೀತಿಯಲ್ಲಿ ಸಮಯ ನಿಗದಿ ಪಡಿಸಿ. ಇಲಾಖೆ ಕೆಲಸ ಸರಿಯಾಗಿ ಕೆಲಸ ಮಾಡಬಹುದು. ಕಳೆದ 15 ರಿಂದ 20 ವರ್ಷಗಳಿಂದ ಒಂದೇ ಕಡೆ ಅಧಿಕಾರಿಗಳು ಇರುವುದರಿಂದ ವರ್ತನೆ ಬದಲಾಗಿದೆ. ಆದ್ದರಿಂದ ಸಾರ್ವಜನಿಕರ ಕೆಲ ಕಾರ್ಯದಲ್ಲಿ ವಿಳಂಬ ಆಗುತ್ತಿದೆ. ಆದ್ದರಿಂದ ಅಧಿಕಾರಿಗಳಿಗೆ ಬದಲಿಸುವ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸಚಿವ ಸತೀಶ್ ಜಾರಕಿಹೊಳಿಗೆ ತಿಳಿಸಿದರು.