ಎರಡನೇ ಪೂರಕ ಪರೀಕ್ಷೆ ಅಚ್ಚುಕಟ್ಟಾಗಿ ನಿರ್ವಹಿಸಿ

HOSPET Dc Meet
ದ್ವಿತೀಯ ಪಿಯುಸಿ 2ನೇ ವಿಶೇಷ ಪೂರಕ ಪರೀಕ್ಷೆ ಕುರಿತು ಹೊಸಪೇಟೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎಸ್ಪಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ., ಹೊಸಪೇಟೆ ಉಪವಿಭಾಗಾಧಿಕಾರಿ ಎನ್.ಮಹಮ್ಮದ್ ಅಲಿ ಅಕ್ರಮ್ ಶಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Published on

ಹೊಸಪೇಟೆ: ದ್ವಿತೀಯ ಪಿಯುಸಿ 2ನೇ ವಿಶೇಷ ಪೂರಕ ಪರೀಕ್ಷೆಗಳು ಆ.21 ರಿಂದ ಸೆ.2ರ ವರೆಗೆ ನಡೆಯಲಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಎಂ.ಎಸ್.ದಿವಾಕರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಪೂರ್ವಸಿದ್ಧತೆ ಕುರಿತು ವಿವಿಧ ಇಲಾಖೆಯ ತಾಲೂಕುವಾರು ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಪ್ರಶ್ನೆ ಪತ್ರಿಕೆಗಳ ಸಾಗಿಸುವ ವಾಹನಗಳ ಜಿಪಿಎಸ್ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಅಧಿಕಾರಿಗಳು ಸೂಕ್ತ ನಿಗಾವಹಿಸಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗೆ ಅನುವು ಮಾಡಿಕೊಡದೆ, ಪಾರದರ್ಶಕವಾಗಿ ನಡೆಸಲು ಸಹಕರಿಸಬೇಕು.

ಆ.21ರಿಂದ ಸೆ.2ರ ವರೆಗೆ ಮಧ್ಯಾಹ್ನ 2.15 ರಿಂದ ಸಂಜೆ 5.30ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಂತರ ಪ್ರಶ್ನೆ-ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ರವಾನಿಸುವವರೆಗೂ ಎಲ್ಲ ತಾಲೂಕಿನ ನಿಯೋಜಿತ ಅಂಚೆ ಸಿಬ್ಬಂದಿ ಕರ್ತವ್ಯದಲ್ಲಿರಬೇಕು ಎಂದು ಸೂಚಿಸಿದರು.

ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರಭಾರ ಡಿಡಿಪಿಯು ನಾಗರಾಜ ಹವಾಲ್ದಾರ್ ಮಾತನಾಡಿ, ಜಿಲ್ಲೆಯ 95 ಕಾಲೇಜುಗಳಿಂದ ಒಟ್ಟು 4,184 ವಿದ್ಯಾರ್ಥಿಗಳು 2ನೇ ವಿಶೇಷ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿ ತಾಲೂಕಿಗೊಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಬಂದೋಬಸ್ತ್, ಆರೋಗ್ಯ ಸೇವೆ: ಶಾಂತಿಯುತ ಪರೀಕ್ಷೆ ನಡೆಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಪ್ರಶ್ನೆ ಪತ್ರಿಕೆಗಳ ಸಂಗ್ರಹಿಸಲು ಮತ್ತು ರವಾನಿಸಲು ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ನಕಲು ಹಾಗೂ ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಜತೆಗೆ ಪರೀಕ್ಷೆ ಮುಗಿಯವವರೆಗೂ ಕೇಂದ್ರದಲ್ಲಿರಬೇಕು ಎಂದು ಡಿಸಿ ತಿಳಿಸಿದರು.

ತಾಲೂಕಿಗೊಂದು ಕೇಂದ್ರ: ಹೊಸಪೇಟೆ ತಾಲೂಕಿನ ವಿಜಯನಗರ ಪಿಯು ಕಾಲೇಜು, ಕೂಡ್ಲಿಗಿಯ ಸರ್ಕಾರಿ ಪಿಯು ಕಾಲೇಜು, ಹಗರಿಬೊಮ್ಮನಹಳ್ಳಿಯ ಸರ್ಕಾರಿ ಜಿಬಿ ಪಿಯು ಕಾಲೇಜು, ಹೂವಿನಹಡಗಲಿಯ ಎಸ್‌ಎಸ್‌ಕೆ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಹಾಗೂ ಹರಪನಹಳ್ಳಿಯ ಎಸ್‌ಯುಜೆಎಂ ಪಿಯು ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net