

ಹೊಸಪೇಟೆ: ಕಳೆದ ವಾರ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೃಹಿಣಿ ಮಿಸ್ಸಿಂಗ್ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಒಲ್ಲದ ಮನಸ್ಸಿನಿಂದ ಮದುವೆಯಾಗಿದ್ದ ಯುವತಿ ಇದೀಗ ಪ್ರಿಯಕರನ ಕೈಹಿಡಿದಿದ್ದಾಳೆ. ಅಲ್ಲದೆ, ಪತಿ ಹಾಗೂ ತವರು ಮನೆಯಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಕೂಡ್ಲಿಗಿ ತಾಲೂಕಿನ ಚಿರತಗುಂಡ ಗ್ರಾಮದ ರಾಧಿಕಾ ಮತ್ತು ಕೊಟ್ರೇಶ್ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, 3 ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ, ಇದೀಗ ಪ್ರಿತಮನೊಂದಿಗೆ ಮನೆ ಬಿಟ್ಟು ಬಂದಿದ್ದು, ಮಂತ್ರಾಲಯ, ದಾವಣಗೆರೆ, ಶಿವಮೊಗ್ಗ ಹಾಗೂ ಧರ್ಮಸ್ಥಳ ಪ್ರವಾಸ ನಡೆಸಿದ್ದಾರೆ. ಮಂಗಳವಾರ ವಿಜಯನಗರ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ್ದ ಜೋಡಿ, ತಮಗೆ ರಕ್ಷಣೆಗೆ ನೀಡುವಂತೆ ಎಸ್ಪಿ ಶ್ರೀಹರಿಬಾಬು ಅವರಿಗೆ ಮನವಿ ಸಲ್ಲಿಸಿದೆ.
ಇದನ್ನೂ ಓದಿ: ಮದುವೆಯಾಗದೆ ತಾಯಿಯಾದ ಜನಪ್ರಿಯ ಪಾಪ್ ಗಾಯಕಿ ರಿಹನ್ನಾ
ನಾನು ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕೊಟ್ರೇಶ್ ಬಿಎಸ್‌ಸಿ ವಿದ್ಯಾರ್ಥಿ. ನಮ್ಮಿಬ್ಬರ ಪ್ರೀತಿ ವಿಷಯ ಪಾಲಕರಿಗೆ ಗೊತ್ತಾಗಿದ್ದರಿಂದ ನನ್ನ ಇಚ್ಛೆಗೆ ವಿರುದ್ಧವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಸೋದರ ಮಾವ ಜಲಂದರ್‌ಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಪತಿಯೊಂದಿಗೆ ಜೀವಿಸಲು ಇಷ್ಟವಿಲ್ಲ. ಹೀಗಾಗಿ ಮನೆ ಬಿಟ್ಟು ಕೊಟ್ರೇಶ್ ಜತೆ ಬಂದಿದ್ದೇನೆ. ಹೀಗಾಗಿ ನನ್ನ ಪತಿ ಮತ್ತು ತವರು ಮನೆಯವರಿಂದ ನಮ್ಮಿಬ್ಬರ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡುವಂತೆ ರಾಧಿಕಾ ಅಂಗಲಾಚಿಕೊಂಡಳು.
ಈ ವೇಳೆ ಪ್ರಾಥಮಿಕ ವಿಚಾರಣೆ ನಡೆಸಿದ ಎಸ್ಪಿ ಶ್ರೀಹರಿಬಾಬು, ಇಬ್ಬರಿಗೂ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ತಕ್ಷಣ ಗುಡೇಕೋಟೆ ಠಾಣಾಧಿಕಾರಿಗೆ ಕರೆ ಮಾಡಿ, ಕಳೆದ ವಾರ ದಾಖಲಾಗಿದ್ದ ಗೃಹಿಣಿ ಕಾಣೆ ಪ್ರಕರಣದ ರಾಧಿಕಾ ಎಸ್ಪಿ ಕಚೇರಿಗೆ ಹಾಜರಾಗಿದ್ದಾರೆ. ಅವರಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಂಬಂಧಿಕರಿಗೆ ಕಾನೂನು ತಿಳಿವಳಿಕೆ ನೀಡಿ, ರಾಧಿಕಾ ಮತ್ತು ಕೊಟ್ರೇಶ್‌ಗೆ ರಕ್ಷಣೆ ಒದಗಿಸುವಂತೆ ನಿರ್ದೇಶನ ನಿಡಿದರು. ಬಳಿಕ ಎಸ್ಪಿ ಕಚೇರಿಯಲ್ಲಿದ್ದ ಸಿಬ್ಬಂದಿಯೊಬ್ಬರನ್ನು ಜತೆ ಮಾಡಿ ರಾಧಿಕಾ ಮತ್ತು ಕೊಟ್ರೇಶ್‌ನನ್ನು ಗುಡೇಕೋಟೆ ಠಾಣೆಗೆ ಕಳಿಸಿಕೊಟ್ಟರು.