ಪೈಗಂಬರ್ ಗೆ ನಿಂದಿಸಿದವರಿಗೆ ಶಿಕ್ಷೆಯಾಗಲಿ

26 MANJU 07
Published on

ಹೊಸಪೇಟೆ: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಯತಿ ನರಸಿಂಗಾನಂದ ಮತ್ತು ರಾಮಗಿರಿ ಅವಹೇಳನಕಾರಿಯಾಗಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಜಿಪ್ನೆ ಈದ್ ಮೀಲಾದುನ್ನಬಿ ಕಮಿಟಿ ನೇತೃತ್ವದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದಿಂದ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಈದ್ಗಾ ಮೈದಾನದಿಂದ ಆರಂಭವಾದ ಬೃಹತ್ ಪ್ರತಿಭಟನಾ ರ್ಯಾ ಲಿಯಲ್ಲಿ ಪ್ರತಿಭಟನಾಕಾರರು, ಯತಿ ನರಸಿಂಗಾನಂದ ಮತ್ತು ರಾಮಗಿರಿ ಅವರನ್ನು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಬಳಿಕ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರವಾದಿ ಪೈಗಂಬರ್ ಅವರನ್ನು ನಿಂದಿಸಿರುವ ಹೇಳಿಕೆಗಳು, ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಭಂಗಗೊಳಿಸುತ್ತವೆ. ಅಲ್ಲದೆ ಇಸ್ಲಾಮೋಫೋಬಿಯಾ ಮತ್ತು ಮುಸ್ಲಿಮರ ಬಗ್ಗೆ ತಾರತಮ್ಯದ ಮನೋಭಾವವನ್ನು ಉತ್ತೇಜಿಸುತ್ತದೆ.

ಈ ಸಮಾಜದ ಜವಾಬ್ದಾರಿಯುತ ಸದಸ್ಯರಾಗಿ, ಅಂತಹ ದ್ವೇಷ ಭಾಷಣಕಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಮತ್ತು ಅವರನ್ನು ನ್ಯಾಯದ ಮುಂದೆ ತರುವುದು ನಮ್ಮ ಕರ್ತವ್ಯ. ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಮಾನಹಾನಿ ಮಾಡುವುದು ಗಂಭೀರ ಅಪರಾಧವಾಗಿದ್ದು, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರವಾದಿಗಳನ್ನು ನಿಂದಿಸುವುದು ಸಮಾಜದಲ್ಲಿ ಶಾಂತಿ ಭಂಗವಾಗಿ ಕಾನೂನು, ಸುವ್ಯವಸ್ಥೆ ಹಾಳಾಗಲಿದೆ. ನಿಂದಿಸಿದವರಿಗೆ ಶಿಕ್ಷೆಯಾಗಬೇಕು. ಅವರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಅಲ್ಲಾಭಕ್ಷಿ, ಕಾರ್ಯದರ್ಶಿ ಖಾದರ್ ರಫಯ್, ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್, ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಖದೀರ್, ವಕೀಲ ಸದ್ದಾಮ್ ಹುಸೇನ್, ಅನ್ಸರ್ ಬಾಷಾ, ಮೋಷಿನ್ ಕುತ್ವಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net