

ಹೊಸಪೇಟೆ: ವಿಶ್ವ ಜನಸಂಖ್ಯಾ ದಿನವು ಜನರಿಗೆ ಜನಸಂಖ್ಯೆಯ ನಿಯಂತ್ರಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಮಹತ್ವವನ್ನು ಅರಿವಿಗೆ ತರುವ ವಿಶೇಷ ದಿನವಾಗಿದೆ ಡಿಎಚ್‌ಒ ಡಾ.ಶಂಕರ್‌ನಾಯ್ಕ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಟತ್ರೆ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜನ ಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರತಿ ವ್ಯಕ್ತಿಯೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣವು ಉತ್ತಮ ಕುಟುಂಬ ನಿರ್ಮಾಣಕ್ಕೆ, ಆರೋಗ್ಯದ ರಕ್ಷಣೆ ಹಾಗೂ ಸಮಾಜದ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿನಿಯರು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂದರು.
ಜನಸಂಖ್ಯಾ ಸ್ಫೋಟದಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣವನ್ನು ನಾವು ಕಾಯ್ದುಕೊಳ್ಳಬೇಕಿದೆ.ಇದರಿಂದ ಆಹಾರ ಸಮಸ್ಯೆ, ನಿರುದ್ಯೋಗ, ಬಡತನ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದೆ. ಅದಕ್ಕಾಗಿ ಜನಸಂಖ್ಯೆ ನಿಯಂತ್ರಿಸಬೇಕು. ಜನಸಂಖ್ಯೆಗೆ ತಕ್ಕನಾಗಿ ಮೂಲ ಸೌಕರ್ಯ ಒದಗಿಸಬೇಕಿದೆ ಎಂದರು.
ಆರ್.ಸಿ.ಎಚ್. ಡಾ.ಜಂಬಯ್ಯ ನಾಯಕ, ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ.ರಾಧಿಕಾ, ಜಿಲ್ಲಾ ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಧರ್ಮನಗೌಡ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ನೂರ್ ಬಾಷಾ ಇತರರಿದ್ದರು.