ಹೊಸಪೇಟೆ: ಮಾಲಿನ್ಯದಿಂದ ಆಗುವ ಅನಾಹುತಗಳನ್ನು ತಪ್ಪಿಸಲು ನಿಯಂತ್ರಣ ಮಂಡಳಿಗಳನ್ನು ಮಾಜಿ ಪ್ರದಾನಿ ಇಂದಿರಾಗಾಂಧಿ ವಿಶೇಷ ಕಾನೂನು ತಂದರು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 6395 ಆನೆಗಳಿವೆ ದೇಶದಲ್ಲಿ ನಾವು ಒಂದನೇ ಸ್ಥಾನದಲ್ಲಿದ್ದೆವೆ. 563 ಹುಲಿಗಳಿವೆ ಎರಡನೇ ಸ್ಥಾನ ಪಡೆದಿದ್ದೇವೆ. ರಾಜ್ಯದಲ್ಲಿ 21 ಪ್ರತಿಶತ ಅರಣ್ಯವಿದೆ. ರಾಜ್ಯದ 43 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಪ್ರಾಣಿ, ಸಸ್ಯ, ಪಕ್ಷಿಗಳ ಪ್ರಭೇದಿಗಳು ಹೆಚ್ಚಿವೆ. ಅತ್ಯಂತ ಜೀವ ವೈವಿಧ್ಯಮಯ ತಾಣ ಕರ್ನಾಟಕ ರಾಜ್ಯವಾಗಿದೆ. ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಪರಿಸರ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕಿದೆ ಎಂದರು.
ತಾಪಮಾನ ಏರುಪೇರಾಗಲು ಪರಿಸರಮಾಲಿನ್ಯವೇ ಕಾರಣವಾಗಿದೆ. ಕರೋನ ವೇಳೆ ಆಮ್ಲಜನಕ ಕೊರತೆಯಿಂದ ಹಲವರು ಮೃತಪಟ್ಟರು. ತ್ಯಾಜ್ಯ ನೀರು ಬಿಡುವುದರಿಂದ ಕುಡಿವ ನೀರು ಕಲುಷಿತವಾಗಿದೆ. ಶುದ್ಧ ಗಾಳಿ, ನೀರು, ಆಹಾರ ಸಿಗಬೇಕು ಎಂದರೆ ಮಾಲಿನ್ಯ ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ಪ್ರಕೃತಿ ವಿಕೋಪಕ್ಕೆ ತಡಿಯಲು ಪರಿಸರ ಸಂರಕ್ಷಣೆ ಮಾಡಬೇಕಿದೆ. ಪರಿಸರ ಸಂಪತ್ತು ಅತಿಮಿತಿಯಿಂದ ಬಳಕೆ ಮಾಡಬೇಕಿದೆ. ದೀಪಾವಳಿಯಲ್ಲಿ ರಾಸಾಯನಿಕ ಪಟಾಕಿ ಬಳಕೆ ಬದಲು ಪರಿಸರ ಸ್ನೇಹಿ ಪಟಾಕಿ ಬಳಕೆ ಮಾಡಿ ಪರಿಸರ ಉಳಿಸೋಣ. ಊರಿಗೊಂದು ಕೆರೆ, ಮನೆಗೊಂದು ಮರ ಹಾಕುವ ಸಂಕಲ್ಪ ಮಾಡಬೇಕು. ಸ್ವಚ್ಚ, ನಿರ್ಮಲಾ, ಸುಂದರ ವಿಜಯನಗರ, ಕರ್ನಾಟಕ ಪ್ರಯತ್ನ ಮಾಡುವ ಸಂಕಲ್ಪ ಮಾಡೋಣ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕಲುಷಿತ ವಾತವರಣದಿಂದ ಉಸಿರು ಗಟ್ಟುತ್ತಿದೆ. ಆದ್ದರಿಂದ ನಾವು ಜಾಗೃತರಾಗಬೇಕು. ಪರಿಸರ ಸಂರಕ್ಷಣೆ ಕಾಪಾಡು ಜವಾಬ್ದಾರಿ ಹೊರಬೇಕು. ಮಂಡಳಿಗೆ 50 ವರ್ಷದ ಸುವರ್ಣ ಮಹೋತ್ಸವ ಹಿನ್ನೆಲೆ ಜಾಗೃತಿ ಮೂಡಿಸುವ ಕಾರ್ಯ ರಾಜ್ಯ ಸರ್ಕಾರ ನಡೆಸುತ್ತಿದೆ ಎಂದರು.
ಸಂಸದ ಈ.ತುಕಾರಾಂ ಮಾತನಾಡಿ, 50 ವರ್ಷಗಳಿಂದ ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಸುತ್ತಿದೆ. ಅಖಂಡ ಬಳ್ಳಾರಿಯಲ್ಲಿ ಖನಿಜ, ನೀರು ಸೇರಿದಂತೆ ಸಂಪತ್ಬರಿತ ಜಿಲ್ಲೆಯಾಗಿದೆ. ಇಲ್ಲಿನ ಖನಿಜ ಸಂಪತ್ತು ಸೇರಿದಂತೆ ಜೀವವೈವಿಧ್ಯತೆಯಿಂದ ಹೊಮನದಿದೆ. ಇಲ್ಲಿ ಆಮ್ಲಜನಕ ಭರಿತ ವಾತವರಣ ಇದೆ. ಪರಿಸರವನ್ನು ನಾವು ಪ್ರೀತಿ ಮಾಡಬೇಕಿದೆ. ಜತೆಗೆ ಮುಂದಿನ ಪೀಳಿಗೆಗೆ ಮಾರಕವಾಗದ ರೀತಿಯಲ್ಲಿ ನೆಲ ಜಲ ಸಂಪತ್ತು ವೈಜ್ಞಾನಿಕವಾಗಿ ಬಳಕೆ ಆಗಬೇಕು ಎಂದು ಒತ್ತಾಯಿಸಿದರು.
ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ಎಚ್.ಆರ್.ಗವಿಯಪ್ಪ, ಕೃಷ್ಣನಾಯ್ಕ, ಎನ್.ಟಿ.ಶ್ರೀನಿವಾಸ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಅಧ್ಯಕ್ಷ ಕುರಿಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಸಿಇಒ ಅಕ್ರಂ ಅಲಿ ಷಾ, ಅನುಪಮಾ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಇತರರಿದ್ದರು.