

ಹೊಸಪೇಟೆ: ಹಿಂದಿನ ಎಸ್ಪಿ ಡಾ.ಅರುಣ್ ಕೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ಯಾವುದೇ ಕಾರಣಕ್ಕೂ ರಾಜಕೀಯ ವ್ಯಕ್ತಿಗಳಿಗೆ ಮಣಿಯುವುದಿಲ್ಲ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು. ವಿಜಯನಗರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊಸ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟುವ ವಿಚಾರವಾಗಿ ಹಿಂದಿನ ಎಸ್ಪಿ ಡಾ.ಅರುಣ್ ಅವರು ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿರುವುದು ನಮಗೆ ದಾರಿದೀಪವಾಗಿದೆ. ನಾನೂ ಸಹ ಸಿಬ್ಬಂದಿ ಸಹಕಾರ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಅಕ್ರಮ ಚಟುವಟಿಕೆ ತಡೆಗೆ ಶ್ರಮಿಸುತ್ತೇನೆ ಎಂದರು.
ಅಧಿಕಾರ ಹಸ್ತಾಂತರಿಸಿದ ನಿರ್ಗಮಿತ ಎಸ್ಪಿ ಡಾ.ಅರುಣ್ ಕೆ. ಮಾತನಾಡಿ, ನೂತನ ವಿಜಯನಗರ ಜಿಲ್ಲೆಗೆ ಪ್ರಥಮ ಎಸ್ಪಿಯಾಗಿ ನಿಯೋಜನೆಗೊಂಡು ಒಂದು ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಹೊಸ ಜಿಲ್ಲೆಯಾದ್ದರಿಂದ ಹೊಸ ಹೊಸ ಕೆಲಸಗಳನ್ನು ಕಲಿಯುವ ಅವಕಾಶ ಸಿಕ್ಕಿತು. ಜಿಲ್ಲೆಯಲ್ಲಿ ನಡೆವ ಅಪರಾಧ ಪ್ರಕರಣ ಕುರಿತು ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿದ್ದೆ. ಅವರು ಅಚ್ಚುಕಟ್ಟಾಗಿ ಪಾಲಿಸಿದ ಪರಿಣಾಮ ಅಪಹರಣ, ಕೊಲೆ ಹಾಗೂ ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಾಧ್ಯವಾಗಿದೆ. ಇಲಾಖೆ ಸಿಬ್ಬಂದಿ ಜತೆಗೆ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಸಹಕರಿಸಿದ ಕಾರಣ ಕಾರ್ಯನಿರ್ವಹಣೆ ಸುಲಭ ಮತ್ತು ವ್ಯವಸ್ಥಿತವಾಗಿ ಆಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಡಿಎಸ್ಪಿ ವಿಶ್ವನಾಥರಾವ್ ಕುಲ್ಕರ್ಣಿ ಹಾಗೂ ಅಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಗಮಿತ ಎಸ್ಪಿ ಡಾ.ಅರುಣ್ ಕೆ. ಹಾಗೂ ನೂತನ ಎಸ್ಪಿ ಅವರಿಗೆ ಪೊಲೀಸ್ ಸಿಬ್ಬಂದಿ ಗಾರ್ಡ್ ಆಫ್ ಹಾನರ್ ನೀಡಿ ಗೌರವ ಸೂಚಿಸಿದರು.