ಹೊಸದಾಗಿ ಕ್ರಿಮಿನಲ್ ಕಾನೂನು ಅರಿತುಕೊಳ್ಳಿ

news
ಹೊಸಪೇಟೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಅಪರಾಧಿಕ ಕಾನೂನುಗಳ ಕುರಿತ ಕಾರ್ಯಾಗಾರಕ್ಕೆ ನಿವೃತ್ತ ಡಿಜಿಪಿ ಡಾ. ಗುರುಪ್ರಸಾದ್ ಡಿ.ವಿ. ಅವರು ಚಾಲನೆ ನೀಡಿದರು.
Published on

ಹೊಸಪೇಟೆ: ಪೊಲೀಸರು ಹೊಸ ಅಪರಾಧಿಕ ಕಾನೂನಿನ ಕುರಿತು ಅರಿವು ಹೊಂದುವುದು ಮುಖ್ಯ ಎಂದು ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಅಪರಾಧಿಕ ಕಾನೂನುಗಳ ಕಾರ್ಯಾಗಾರ ಚಾಲನೆ ನೀಡಿ ಮಾತನಾಡಿದರು. ಭಾರತೀಯ ನ್ಯಾಯ ಸಂಹಿತಾ ಅಥವಾ ಬಿಎನ್‌ಎಸ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಥವಾ ಬಿಎನ್‌ಎಸ್‌ಎಸ್ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಅಥವಾ ಬಿಎಸ್‌ಎ ಹೊಸದಾಗಿ ಜಾರಿಗೊಂಡ ಕ್ರಿಮಿನಲ್ ಕಾನೂನುಗಳ ಬಗ್ಗೆ ಪೊಲೀಸರು ಅರಿತುಕೊಳ್ಳಬೇಕು. ಅಪರಾಧ ಕಾನೂನಿನಲ್ಲಿ ಬಹಳಷ್ಟು ಬದಲಾವಣೆ ತರಲಿದೆ. ಬಿಎನ್‌ಎಸ್ ಸೆಕ್ಷನ್ 4 ರ ಪ್ರಕಾರ ಶಿಕ್ಷೆ ರೂಪವಾಗಿ ಸಮುದಾಯ ಸೇವೆಯನ್ನು ಪರಿಚಯಿಸಲಾಗುತ್ತಿದೆ ಎಂದರು.

ಲೈAಗಿಕ ಹಲ್ಲೆ ಎಸಗಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸುವುದಕ್ಕೆ ಹೊಸ ಕಾನೂನು ಅವಕಾಶ ನೀಡಿದೆ. ವಿಚಾರಣಾಧೀನ ಕೈದಿಗಳಿಗೆ ಅಂದರೆ, ಜೀವಾವಧಿ ಶಿಕ್ಷೆ ಅಥವಾ ಬಹು ಆರೋಪ ಹೊಂದಿರುವ ಪ್ರಕರಣ ಹೊರತುಪಡಿಸಿ, ಮೊದಲ ಬಾರಿಗೆ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳು ತಮ್ಮ ಗರಿಷ್ಠ ಶಿಕ್ಷೆಯ 3ನೇ ಒಂದು ಭಾಗದಷ್ಟು ಶಿಕ್ಷೆ ಪೂರೈಸಿದ ನಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಫೋರೆನ್ಸಿಕ್ ತಜ್ಞರು ಅಪರಾಧದ ಸ್ಥಳಗಳಿಂದ ಸಾಕ್ಷ್ಯ ಸಂಗ್ರಹಿಸುತ್ತಾರೆ, ಈ ಸಾಕ್ಷ್ಯ ಸಂಗ್ರಹ ಖಚಿತಪಡಿಸಿಕೊಳ್ಳಲಾಗುತ್ತದೆ. ಯಾವುದೇ ಒಂದು ರಾಜ್ಯವು ವಿಧಿವಿಜ್ಞಾನ ಸೌಲಭ್ಯ ಹೊಂದಿಲ್ಲದಿದ್ದರೆ, ಅದು ಇನ್ನೊಂದು ರಾಜ್ಯದಲ್ಲಿ ಸೌಲಭ್ಯ ಬಳಸುತ್ತದೆ ಎಂದರು.

ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ರಾಜ್ಯ ಲಾ ಜರ್ನಲ್ ಪಬ್ಲಿಷರ್ಸನ ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net