ಪರೀಕ್ಷೆ ಪಾರದರ್ಶಕ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧ

15 MANJU 05
Published on

ಹೊಸಪೇಟೆ: ಪಿಡಿಓ ನೇಮಕಾತಿ ಪರೀಕ್ಷೆಯಲ್ಲಿ ನ.16 ಕನ್ನಡ ಭಾಷಾ ಪರೀಕ್ಷೆ ಮತ್ತು 17 ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಶುಕ್ರವಾರ ನಡೆದ ಪಿಡಿಓ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು.

ನ.16 ರಂದು ಕನ್ನಡ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿAದ 4 ಗಂಟೆವರೆಗೆ ನಡೆಯಲಿದೆ. ನಗರದಲ್ಲಿ 22, ಹಗರಿಬೊಮ್ಮಹಳ್ಳಿ 2 ಕೇಂದ್ರಗಳು ಸೇರಿದಂತೆ ಓಟ್ಟು 24 ಕೇಂದ್ರಗಳನ್ನು ನಿಯೋಜಿಸಲಾಗಿದೆ. ಒಟ್ಟು 8214 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ನ.17 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಎರಡು ಪತ್ರಿಕೆಗಳಿದ್ದು, ಬೆ.10 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 4ರ ವರೆಗೆ ಪರೀಕ್ಷೆ ನಡೆಯಲಿದೆ. 24 ಕೇಂದ್ರ, ಹಗರಿಬೊಮ್ಮಹಳ್ಳಿಯಲ್ಲಿ 06 ಕೇಂದ್ರ ಮತ್ತು ಕೂಡ್ಲಿಗಿಯಲ್ಲಿ 3 ಕೇಂದ್ರಗಳು ಸೇರಿದಂತೆ ಒಟ್ಟು 33 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 12036 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪ್ರತಿ ನಾಲ್ಕು ಕೇಂದ್ರಕ್ಕೆ ಒಬ್ಬರಂತೆ ಒಟ್ಟು 9 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಒಟ್ಟು 33 ಜನ ಅಧಿಕಾರಿಗಳು ಸ್ಥಳ ನೀರಿಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿಲ್ಲ. ಪರೀಕ್ಷಾರ್ಥಿಗಳು ಗಂಭೀರವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಅಕ್ರಮ ಕಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ಪರೀಕ್ಷಾ ವೀಕ್ಷಕ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ವೇಳಾಪಟ್ಟಿಯನ್ನು ಪರೀಕ್ಷೆಗಳು ಸುಗಮವಾಗಿ ನಡೆಯಲು ನಿಗಧಿತ ವೇಳೆಗಿಂತ ಹತ್ತು ನಿಮಿಷ ಮುಂಚಿತವಾಗಿ ಹಾಜರಿರಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದರು.

ಎಎಸ್ಪಿ ಸಲೀಂ ಪಾಷಾ, ಎಸಿ ಪಿ.ವಿವೇಕಾನಂದ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ನೋಡಲ್ ಅಧಿಕಾರಿ ಹುಲಿಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net