ಗ್ರಾಪಂ ಸದಸ್ಯರಿಗೆ ಗೌರವಧನ ಹೆಚ್ಚಿಸಿ

02 MANJU 05
Published on

ಹೊಸಪೇಟೆ: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ವಿಜಯನಗರ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಾಯಿಬಾಬ ದೇಗುಲದ ಬಳಿ ಸೇರಿದ್ದ ಪ್ರತಿಭಟನಕಾರರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯಿತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಜವಾಬ್ದಾರಿ ನಕ್ಷೆ ರಚಿಸಬೇಕು. ತಂತ್ರಜ್ಞಾನದ ಸೌಲಭ್ಯದೊಂದಿಗೆ ಗ್ರಾಮ ಸಭೆ ಆಯೋಜಿಸಲು ಆಂದೋಲನ ನಡೆಸಬೇಕು. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್ ನೇಮಕಕ್ಕೆ ಅವಕಾಶ ನೀಡಬೇಕು. ಬೇಡಿಕೆಗೆ ತಕ್ಕಂತೆ ಎಲೆಕ್ಟ್ರಿಷಿಯನ್ ನೇಮಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 15 ಸಾವಿರ ರೂ. ಉಪಾಧ್ಯಕ್ಷರಿಗೆ 12 ಸಾವಿರ ರೂ. ಹಾಗೂ ಸದಸ್ಯರಿಗೆ 10 ಸಾವಿರ ರೂ. ಮಾಸಿಕ ಗೌರವಧನ ನಿಗದಿಪಡಿಸಬೇಕು. ಗ್ರಾ.ಪಂ. ಸದಸ್ಯರಿಗೆ ಉಚಿತ ಬಸ್ ಪಾಸ್ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. 15ನೇ ಹಣಕಾಸು ಆಯೋಗದ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ನಿಲ್ಲಬೇಕು. ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು. ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ನಿಯಮಗಳನ್ನು ರೂಪಿಸಬೇಕು. ಎಲ್ಲ ಆಸ್ತಿಗಳಿಗೆ ಇ–ಸ್ವತ್ತು ದಾಖಲೆ ಸೃಜಿಸಿ ವಿತರಿಸಬೇಕು. ಅರ್ಜಿ ಹಾಕಿದವರಿಗೆ ಮಾತ್ರ ಇ–ಸ್ವತ್ತು ನೀಡುವ ಪದ್ಧತಿ ನಿಲ್ಲಿಸಬೇಕು. ವಿಧಾನಸೌಧ, ಸರ್ಕಾರಿ ಕಚೇರಿಗಳು ಹಾಗೂ ಟೋಲ್‌ಗೇಟ್‌ಗಳಲ್ಲಿ ಸದಸ್ಯರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ವಿಜಯನಗರ ಜಿಲ್ಲಾಧ್ಯಕ್ಷ ಸಣ್ಣಕ್ಕಿ, ಪ್ರಮುಖರಾದ ಜಂಬಣ್ಣ, ಮುರಳಿರಾಜ್, ಮಮತಾ ತಳವಾರ್, ಗಡ್ಡಿನಾಗರಾಜ್, ಗೋವಿಂದನಾಯ್ಕ್, ದೂಪದಹಳ್ಳಿ ಮಂಜುನಾಥ, ರಮೇಶ್ ಗದ್ದಿಕೇರಿ, ಸುಧಾಜೋಗತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net