

ಹೊಸಪೇಟೆ: ಜಮ್ಮು ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕ ಕೃತ್ಯ ಹಿನ್ನೆಲೆಯಲ್ಲಿ ಹಂಪಿಯಲ್ಲಿ ವಿಜಯನಗರ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಹAಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಹಂಪಿಗೆ ಆಗಮಿಸುವ ವಾಹನಗಳನ್ನು ಕೂಡ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಇನ್ನೂ ಪೊಲೀಸರು ಮಫ್ತಿಯಲ್ಲಿ ತಿರುಗಾಡಿ ಅನುಮಾನಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ದೇಶ, ವಿದೇಶಿ ಪ್ರವಾಸಿಗರಿಗೆ ಭದ್ರತೆ ಒದಗಿಸುವುದಕ್ಕಾಗಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಹಂಪಿ, ತುಂಗಭದ್ರಾ ಜಲಾಶಯದ ಬಳಿಯೂ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ತೀವ್ರ ನಿಗಾವಹಿಸಲು ಉನ್ನತಮಟ್ಟದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲ, ಸಾಸಿವೆ ಕಾಳು ಗಣಪತಿ ಮಂಟಪ, ವಿಜಯ ವಿಠಲ ದೇಗುಲ, ಕೋಟೆ ಆಂಜನೇಯ, ಕಡ್ಡಿರಾಂಪುರ ಕ್ರಾಸ್ ಸೇರಿದಂತೆ ಕೆಲ ಪ್ರಮುಖ ಸ್ಮಾರಕಗಳ ಬಳಿಯೂ ಪೊಲೀಸರು ನಿಗಾವಹಿಸಿದ್ದಾರೆ.
ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪ್ರಮುಖ ಪ್ರವಾಸಿ ತಾಣ ಹಂಪಿ, ಟಿಬಿಡ್ಯಾಂನಲ್ಲೂ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ದೇಶ, ವಿದೇಶಿ ಪ್ರವಾಸಿಗರ ಸುರಕ್ಷತೆ ದೃಷ್ಟಿಕೋನದೊಂದಿಗೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆಯೂ ಹೆಚ್ಚಿಸಲಾಗಿದೆ. - ಬಿ.ಎಲ್.ಶ್ರೀಹರಿಬಾಬು, ಎಸ್ಪಿ ವಿಜಯನಗರ,