ಸಹಕಾರ ರಂಗ ಶಾಲಾ ಪಠ್ಯದ ಭಾಗವಾಗಲಿ; ಪಿಎಸಿಆರ್‌ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ ಒತ್ತಾಯ

14112022 hospet sahakara saptaha
Published on


69ನೇ ಸಹಕಾರ ಸಪ್ತಾಹ ಉದ್ಘಾಟನೆ

ಹೊಸಪೇಟೆ: ದೇಶದ ಆರ್ಥಿಕ ಬಲವಧರ್ನೆಯಲ್ಲಿ ಸಹಕಾರ ರಂಗದ ಕೊಡುಗೆ ಅಪಾರ. ಸಹಕಾರ ಕ್ಷೇತ್ರದ ಪರಿಚಯ ಮತ್ತು ಮಹತ್ವವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ ಒತ್ತಾಯಿಸಿದರು.

‘ಭಾರತ 75- ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಧ್ಯೇಯ ವಾಕ್ಯದಡಿ ರಾಜ್ಯ ಸಹಕಾರ ಮಹಾ ಮಂಡಳ ನಿ., ಜಿಲ್ಲಾ ಸಹಕಾರ ಯೂನಿಯನ್ ನಿ. ಹೊಸಪೇಟೆ, ಜಿಲ್ಲಾ ಹಾಲು ಒಕ್ಕೂಟ, ಸಹಕಾರ ಇಲಾಖೆಗಳ ಆಶ್ರಯದಲ್ಲಿ ನಗರದ ಬಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ಪೀಳಿಗೆ ದೇಶದ ಸಹಕಾರ ಕ್ಷೇತ್ರದ ಉಗಮ ಮತ್ತು ಬೆಳವಣಿಗೆಯನ್ನು ಅರಿಯುವುದು ಅತ್ಯಗತ್ಯವಾಗಿದೆ. ಶಾಲಾ ಪಠ್ಯದಲ್ಲಿ ಅವುಗಳನ್ನು ಸೇರಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಸ್ವಹಿತಾಸಕ್ತಿಯಿಂದಾಗಿ ಅನೇಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಾಗಿಲು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಆರ್‌ಬಿಐ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗ್ರಾಹಕರೊಂದಿಗೆ ಪಾರದರ್ಶಕ ವಹಿವಾಟು ನಡೆಸಿ, ಸಹಕಾರ ಸಂಘಗಳನ್ನು ಬಲ ಪಡಿಸಬೇಕು ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್ ಸಿಇಒ ಬಿ.ಎಸ್.ಹರೀಶ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ಸಹಕಾರ ರಂಗ ಎಲ್ಲ ವಲಯಗಳಲ್ಲಿ ವಿಸ್ತರಿಸಿಕೊಂಡಿದೆ. ಈ ಹಿಂದೆ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆರಂಭಗೊಂಡ ಸಹಕಾರ ಕ್ಷೇತ್ರ, ವಿಮುಕ್ತ ದೇವದಾಸಿಯರು, ಅಂಗವಿಕಲರು ಹಾಗೂ ವಿವಿಧ ವಲಯದಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕರರು, ವಯಸ್ಕರರು ಸಹಕಾರ ತತ್ವದಡಿ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ. ಸಮಾಜದಲ್ಲಿ ಆರೋಗ್ಯಕರ ಆರ್ಥಿಕ ಸ್ಪರ್ಧೆ ಏರ್ಪಟ್ಟಿದೆ. ಜನ ಸಾಮಾನ್ಯರಲ್ಲಿ ಹಣಕಾಸಿನ ಸಾಕ್ಷರತೆ ಉಂಟಾಗಿದೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ಅವಳಿ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚು ಬೆಳೆ ಸಾಲ ನೀಡಿದ್ದು, ರೈತರಿಗೆ ಅನುಕೂಲವಾಗಿದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಇಲ್ಲದಿದ್ದರಿಂದ ಇಲ್ಲಿ ನಡೆಯಬಹುದಾಗಿದ್ದ ಐದಾರು ಸಾವಿರ ಕೋಟಿ ರೂ. ಆರ್ಥಿಕ ಚಟುವಟಿಕೆ ಕೈತಪ್ಪಿದೆ. ಸಕ್ಕರೆ ಕಾರ್ಖಾನೆ ಮತ್ತು ಎಣ್ಣೆ ಉತ್ಪದನಾ ಘಟಕಗಳು ಕಾರ್ಯಾರಂಭಿಸಿದರೆ, ಈ ಭಾಗದ ರೈತಾಪಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಜೆ.ವೃಷಬೇಂದ್ರಯ್ಯ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಅಯ್ಯಳಿ ಶಂಕರಪ್ಪ, ಗೌಳಿ ಕುಮಾರ್, ಪ್ರಿಯಾಂಕ ಜೈನ್, ಬಿ.ಎಚ್.ರಾಮಣ್ಣ, ಉಪನ್ಯಾಸಕ ಸುಭಾಷ ಎ.ಗೌಡ್ರ, ಜಂಬಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net