

ಹೊಸಪೇಟೆ: ಸರ್ಕಾರದ ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಹೊಣೆಗಾರಿಕೆ ಹೊಂದಿರುವ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಉತ್ತಮವಾಗಿ ಕಾರ್ಯ ಮಾಡುವುದರ ಮೂಲಕ ಸಾರ್ವಜನಿಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಬಡವರು ಕೃಷಿ ಕಾರ್ಮಿಕರು ನೊಂದವರ ಬಗ್ಗೆ ಅನುಕಂಪ, ಅಂತಃಕರಣವಿಟ್ಟುಕೊAಡು ಕೆಲಸ ನಿರ್ವಹಿಸಬೇಕು. ಅರ್ಜಿದಾರರು ಅನವಶ್ಯಕವಾಗಿ ಕಚೇರಿಗೆ ಅಲೆಯುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು, ನಿಯಮಾನುಸಾರ ಕಾಲಮಿತಿಯೊಳಗೆ ಕಡತ ವಿಲೇವಾರಿಯಂತಹ ಕಾರ್ಯಗಳ ಮೂಲಕ ಅಧಿಕಾರಿಗಳು ತಮ್ಮ ಕಚೇರಿಯಲ್ಲಿನ ಸಿಬ್ಬಂದಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಸಹ ಜನಪ್ರತಿನಿಧಿಗಳು ಜನ ಸೇವಕರು ಎಂದು ಅರಿಯಬೇಕು. ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ, ಕರ್ತವ್ಯಲೋಪ ಎಸಗುವುದು ಸಾಬೀತಾದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಜಿಲ್ಲೆಯ ರೈತರ ಸಭೆ ಕರೆದು ಅವರಿಗೆ ನಾನಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ರೈತರ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೇ ಪಾರದರ್ಶಕತೆ ಕಾಯ್ದುಕೊಂಡು ಬೇಗನೆ ಪರಿಹಾರ ದೊರಕುವಂತೆ ಮಾಡಿ ಸಂತ್ರಸ್ಥರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡುಗಳು ಸಿಗುವ ಹಾಗೆ ಆಹಾರ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಮಳೆಗಾಲ ಆರಂಭವಾಗಿದ್ದರಿAದ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದು ಪೈಪು ಒಡೆದು ಅದರಲ್ಲಿ ಕಲುಷಿತ ನೀರು ಸೇರಿ ಕಾಲರಾ, ವಾಂತಿ ಬೇಧಿ ಉಂಟಾಗಿ ಜನರ ಜೀವನಕ್ಕೆ ಕುತ್ತು ಬಾರದ ಹಾಗೆ ನಗರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಬೇಕು. ನಗರವಾಸಿಗಳಿಗೆ ಕಾಲಕಾಲಕ್ಕೆ ಮೂಲಭೂತ ಸೌಕರ್ಯ ಸಿಗುವ ನಿಟ್ಟಿನಲ್ಲಿ ನಗರಸಭೆಯಿಂದ ಟೆಂಡರ್ ಪ್ರಕ್ರಿಯೆ ಸೇರಿದಂತೆ ಎಲ್ಲಾ ಕೆಲಸ ಕಾಮಗಾರಿಗಳು ಕಾಲಮಿತಿಯೊಳಗೆ ನಡೆದು ಪೂರ್ಣವಾಗಬೇಕು. ಡೆಂಗೆಯನ್ನು ಕೂಡಲೇ ನಿಯಂತ್ರಣಕ್ಕೆ ತರಬೇಕು. ಡೆಂಗೆ ಜತೆಗೆ ಬೇರೆ ಬೇರೆ ಕಾಯಿಲೆಗಳು ಉಲ್ಬಣಿಸುತ್ತಿದ್ದು ಬೇರೆ ಬೇರೆ ಕಾಯಿಲೆಯಿಂದ ಬಳಲಿ ಸಾರ್ವಜನಿಕರು ಆಸ್ಪತ್ರೆಗೆ ಬಂದಲ್ಲಿ ಬೆಡ್ ಭರ್ತಿ ನೆಪದಲ್ಲಿ ಯಾರನ್ನು ವಾಪಾಸು ಕಳಿಸಬಾರದು ಎಂದರು.
ಜಿ.ಪA ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಉಪವಿಭಾಗಿಯಾಧಿಕಾರಿ ಚಿದಾನಂದ ಗುರುಸ್ವಾಮಿ, ಪಿಡಿ ಮನೋಹರ್ ಇತರರಿದ್ದರು.