

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕೆಂಬ ಜನರ ಮತ್ತು ಜನಪ್ರತಿನಿಧಿಗಳ ಆಶಯ ಈಡೇರಿಕೆಗಾಗಿ ಸರ್ಕಾರಕ್ಕೆ ಅಗತ್ಯ ವರದಿ ನೀಡಲು ಬೇಕಿರುವ ಸಿದ್ಧತೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಎಷ್ಟು ಹಾಸಿಗೆಯುಳ್ಳ ಜಿಲ್ಲಾಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಇದ್ದರೆ ಮೆಡಿಕಲ್ ಕಾಲೇಜಿಗೆ ಅನುಮತಿ ಪಡೆಯಬಹುದು ಎಂಬ ಮಾಹಿತಿ ಪಡೆದುಕೊಂಡು ವರದಿ ಸಲ್ಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ 5 ಕ್ಷೇತ್ರದ ಇಲಾಖೆಗಳು ಆಯಾ ತಾಲೂಕನ್ನು ಗಮನದಲ್ಲಿಟ್ಟು ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖಾವಾರು ನಿಗದಿಪಡಿಸಿರುವ ಭೌತಿಕ ಗುರಿ-ಸಾಧನೆ ಒಳಗೊಂಡಂತೆ ಪ್ರಸ್ತುತ ವರದಿಯ ಅಂಕಿ ಅಂಶಗಳ ಕುರಿತು ಮಾಹಿತಿ ಪಡೆದುಕೊಂಡರು.
ಇಲಾಖೆಗೆ ಸೃಜಿಸಬೇಕಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಮಾಹಿತಿ ಪಡೆದುಕೊಂಡರು. ಪ್ರತಿ ತಿಂಗಳು ಸಭೆ ನಡೆಸಲಾಗುತ್ತದೆ. ಎಲ್ಲ ಇಲಾಖೆಗಳು ಪ್ರಸ್ತುತ ರಾಜ್ಯ ಮಟ್ಟದಲ್ಲಿ ಪಡೆದುಕೊಂಡಿರುವ ಸ್ಥಾನದ ಶೇಕಡಾವಾರು ಪ್ರಮಾಣದ ಮಾಹಿತಿಯ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು.
ವಿಜಯನಗರ ನೂತನ ಜಿಲ್ಲೆಯಾಗಿದ್ದು, ಅಧಿಕಾರಿಗಳ ಸೃಜನೆ ಹಂತಹಂತವಾಗಿ ನಡೆಯುತ್ತದೆ. ಸದ್ಯ ಇರುವ ಸಂಪನ್ಮೂಲದಿಂದಲೇ ಇಲಾಖಾವಾರು ಪ್ರಗತಿ ಕೈಗೊಳ್ಳಲಾಗುತ್ತದೆ. ಇಲಾಖಾವಾರು ಪ್ರಗತಿ ಹಾಗೂ ಸಮಸ್ಯೆ, ದುರಸ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಅಭಿವೃದ್ಧಿ ಹಾಗೂ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.