

ಹೊಸಪೇಟೆ: ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟ ಕೈ ಬಿಡುವಂತೆ ಆಗ್ರಹಿಸಿ ಎಐಡಿಎಸ್‌ಓ ಸಂಘಟನೆಯಿAದ ನಗರದ ತಹಸೀಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಸಂಚಾಲಕ ಜೆ.ಪಿ.ರವಿಕಿರಣ್ ಮಾತನಾಡಿ, ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ 25 ಲಕ್ಷ ರೂ.ಗಳ ದುಬಾರಿ ಶುಲ್ಕದೊಂದಿಗೆ ಶೇ.15 ಎನ್‌ಆರ್‌ಐ ಕೋಟಾವನ್ನು ಆರಂಭಿಸಲು ನಿರ್ಧರಿಸಿದೆ. ವೈದ್ಯಕೀಯ ಕಾಲೇಜುಗಳಿಗೆ ಹಣ ಹರಿದುಬರಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಈ ವಿಧಾನವು ಬಡ-ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಹೊರೆ ಆಗಲಿದೆ. ಸರ್ಕಾರಿ ಸೀಟುಗಳನ್ನು ಶ್ರೀಮಂತರಿಗೆ ಹರಾಜು ಹಾಕುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣದತ್ತ ತಳ್ಳುವ ಪ್ರಯತ್ನವಾಗಿದೆ ಎಂದು ಆಗ್ರಹಿಸಿದರು.
ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಲು ರಾಜ್ಯದ ಬೊಕ್ಕಸದಿಂದ ಅವಶ್ಯಕ ಹಣವನ್ನು ಮಂಜೂರು ಮಾಡುವ ಬದಲು, ಸರ್ಕಾರ ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಮೇಲೆ ಈ ಹೊರೆ ಹಾಕುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ 12,447 ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರವು ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯ ಒದಗಿಸಬೇಕು. ಸರ್ಕಾರಿ ಕಾಲೇಜುಗಳನ್ನು ಖಾಸಗಿ ಸಂಸ್ಥೆಗಳAತೆ ಲಾಭಗಳಿಸುವ ಕೇಂದ್ರಗಳಾಗಿ ಪರಿವರ್ತಿಸುವ ಬದಲು ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ. ಎಂದು ಒತ್ತಾಯಿಸಿದರು.
ಪ್ರಮುಖರಾದ ಯು.ಉಮಾದೇವಿ, ಆದಿತ್ಯ, ಗೌತಮ್, ಸುಮಾ ಇತರರಿದ್ದರು.