ನವೆಂಬರ್‌ನಲ್ಲಿ ಹಂಪಿ ಉತ್ಸವ

zameer
Published on

ಹೊಸಪೇಟೆ: ಮಾಜಿ ಡಿಸಿಎಂ ದಿ.ಎಂ.ಪಿ.ಪ್ರಕಾಶ ಕಾಲದಿಂದ ಸಾಂಪ್ರದಾಯಿಕವಾಗಿ ನಡೆದು ಬಂದಂತೆ ನವೆಂಬರ್ ಮೊದಲ ವಾರದಲ್ಲಿಯೇ ಹಂಪಿ ಉತ್ಸವ ಆಯೋಜಿಸಲು ಚಿಂತನೆ ನಡೆದಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದಿನಿಂದಲೂ ಹಂಪಿ ಉತ್ಸವವನ್ನು ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ. ಕೆಲ ಸಂದರ್ಭದಲ್ಲಿ ಜನವರಿ, ಫೆಬ್ರವರಿಯಲ್ಲಿ ಆಚರಿಸಿದ್ದರಿಂದ ರೂಢಿ ತಪ್ಪಿದಂತಾಗಿದೆ. ಆದರೆ, ನವೆಂಬರ್‌ನಲ್ಲೇ ಹಂಪಿ ಉತ್ಸವ ಆಯೋಜಿಸಬೇಕು ಎಂಬುದು ಅನೇಕರ ಒತ್ತಾಯವಿದ್ದು, ಸಿಎಂ ಜತೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಪ್ರತಿ ವರ್ಷ ನವೆಂಬರ್‌ನಲ್ಲಿ ಆಯೋಜಿಸುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಮೆ॥ ಹಂಪಿ ಶುಗರ್ಸ್‌ ಪ್ರೈ.ಲಿ.ಗೆ ಸರ್ಕಾರ ಮಂಜೂರು ಮಾಡಿರುವ ಭೂಮಿಗೆ ಸಂಬಂಧಿಸಿ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿರುವ ಬಗ್ಗೆಗೂ ಸಿಎಂ ಗಮನ ಸೆಳೆಯಲಾಗುವುದು. 20 ದಿನಗಳಲ್ಲಿ ಸಕ್ಕರೆ ಕಾರ್ಖಾನೆಗೆ ಸ್ಪಂದಿಸಿ ಸ್ಪಷ್ಟ ಉತ್ತರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕುರಿತು ಪ್ರತಿಕ್ರಿಯಿಸಿದ ಜಮೀರ್, ಇತ್ತೀಚೆಗೆ ಖಾಸಗಿ ವೈದ್ಯರಲ್ಲಿ ಮಾನವೀಯತೆ ಮರೆಯಾಗುತಿದೆ. ಜನರ ಜೀವ ಹಿಂಡಿ, ದುಡ್ಡು ಮಾಡುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಸ್ಪತ್ರೆಯ ಲೋಪ ಕಂಡು ಬಂದಲ್ಲಿ, ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು. ಆ.26ರಿಂದ ಪ್ರತಿ ಜಿಲ್ಲೆಯಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದಂತೆ ಜನಸ್ಪಂದನಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net