

ಹೊಸಪೇಟೆ: ಎಸ್ಸಿಯಲ್ಲಿ ಶೇ.1ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಅಲೆಮಾರಿಗಳ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿಚೌಕ್‌ನಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಅಲೆಮಾರಿ ಸಮುದಾಯದವರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 49 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು ಎಂದು ಗ್ರೇಡ್-2 ತಹಸೀಲ್ದಾರ್ ವೆಂಕಟೇಶ್ ಆಶ್ರೀತ್ ಮುಖಾಂತರ ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಸಂಚಾಲಕ ಸಣ್ಣಮಾರೆಪ್ಪ ಮಾತನಾಡಿ, 'ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ದತ್ತಾಂಶ ಸಂಗ್ರಹಿಸಿದ ನ್ಯಾ.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವು ಈ ಜಾತಿಗಳ ಜನರಿಗೆ ಪ್ರತ್ಯೇಕ ಗುಂಪು ಸೃಷ್ಟಿಸಿ, ಶೇ.1ರಷ್ಟು ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರ್ಕಾರವು ಈ ಶಿಫಾರಸು ಕಡೆಗಣಿಸಿ ಬಲಾಢ್ಯ ಜಾತಿಗಳ ಮತ ಸೆಳೆಯಲು ಅವುಗಳಿಗೆ ಸಿಂಹಪಾಲು ನೀಡಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಒಳಮೀಸಲಾತಿ ಹಂಚುವಾಗ ಅಲೆಮಾರಿ ಜಾತಿಗಳನ್ನು ಬಲಾಢ್ಯ ಸಮುದಾಯದ ಗುಂಪಿನಲ್ಲಿ ಸೇರಿಸಲಾಗಿದೆ. ಆ ಗುಂಪಿನಲ್ಲಿರುವ ಭೋವಿ, ಲಂಬಾಣಿ ಸೇರಿ ಇತರೆ ಸಮುದಾಯಗಳ ಜನರು ಅಕ್ಷರಸ್ಥರಾಗಿದ್ದಾರೆ. ಆದರೆ, ಅಲೆಮಾರಿಗಳಿಗೆ ಇನ್ನು ಅಕ್ಷರ ಜ್ಞಾನವೇ ಇಲ್ಲವಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಅಲೆಮಾರಿಗಳು ಆ ಸಮುದಾಯಗಳ ಜನರೊಂದಿಗೆ ಪೈಪೋಟಿ ನಡೆಸಿ ಮೀಸಲು ಪಡೆಯುವುದು ಕಷ್ಟ ಸಾಧ್ಯ. ಆದ್ದರಿಂದ ರಾಜ್ಯ ಸರ್ಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು. ಇಲ್ಲವೇ, ನಮಗೆ ವಿಷ ಕೊಟ್ಟುಬಿಡಿ ಸತ್ತು ಹೋಗಲು ಸಿದ್ದರಿದ್ದೇವೆ ಎಂದು ಆಗ್ರಹಿಸಿದರು.
ಪ್ರಮುಖರಾದ ಕಿನ್ನರಿಶೇಖಪ್ಪ, ಚೌಡಪ್ಪ, ಜೆ.ರಮೇಶ್, ಶೇಖರ್, ಹನುಮಕ್ಕ, ಮಲ್ಲೇಶಪ್ಪ, ರಾಜಪ್ಪ, ಹಂಪಯ್ಯ ಇತರರಿದ್ದರು.